ರೆಫ್ರಿಜರೇಟರ್ ಅಥವಾ ಫ್ರಿಡ್ಜ್ ಮನೆಯಲ್ಲಿ ಇದರೆ ಅಂದರೆ ಮುಗೀತು. ಉಳಿದಿದ್ದು, ಬಳಿದದ್ದು ಎಲ್ಲವನ್ನೂ ತುರುಕಿ ಇಟ್ಟುಬಿಡುತ್ತಾರೆ. ಕೆಲವೊಮ್ಮೆ ಫ್ರಿಡ್ಜ್ ನಲ್ಲಿ ಇಡೋದಿಕ್ಕೆ ಜಾಗ ಇಲ್ಲದೇ ದೊಡ್ಡದು ತರಬೇಕಿತ್ತು ಅಂತ ಪೇಚಾಡಿಕೊಂಡದ್ದೂ ಇದೆ. ಆದರೆ ಫ್ರಿಡ್ಜ್ ನಲ್ಲಿ ಇಟ್ಟ ಆಹಾರ ಸೇವಿಸುವುದರಿಂದ ಅನಾರೋಗ್ಯಕ್ಕೆ ದಾರಿ ಎಂಬುದು ಎಷ್ಟೋ ಜನರಿಗೆ ಗೊತ್ತಿಲ್ಲ!
ಹೌದು, 5 ದಿನ ಅಥವಾ ಅದಕ್ಕಿಂತ ಹೆಚ್ಚು ಸಮಯ ರೆಫ್ರಿಜರೇಟರ್ ನಲ್ಲಿ ಇರಿಸಿದ ಹಾಲು ಸೇವಿಸಿದರೆ ವೈರಲ್ ಫೀವರ್ ಅಥವಾ ಜ್ವರ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳಬಹುದು ಎಂದು ಹೊಸ ಅಧ್ಯಯನ ವರದಿ ಹೇಳಿದೆ.
ಅಮೆರಿಕದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯಲ್ಲಿ ಹಸಿ ಅಥವ ಶೈತ್ಯೀಕರಿಸಿದ ಹಾಲನ್ನು ಹೆಚ್ಚು ದಿನ ಫ್ರಿಡ್ಜ್ ನಲ್ಲಿ ಇರಿಸಿದ ನಂತರ ಸೇವಿಸಿದರೆ ಕಾಯಿಲೆಗಳು ಆವರಿಸಿಕೊಳ್ಳಬಹುದು ಎಂದು ಪತ್ತೆಯಾಗಿದೆ.
ಜಾನುವಾರುಗಳಲ್ಲಿ ಅತ್ಯಂತ ವೇಗವಾಗಿ ಹಕ್ಕಿಜ್ವರ, ವೈರಲ್ ಗಳು ಬೇಗ ಅಂಟಿಕೊಳ್ಳುತ್ತವೆ. ಆದರೆ ಇದನ್ನು ಪತ್ತೆ ಹಚ್ಚುವುದು ತುಂಬಾ ತಡವಾಗುತ್ತದೆ. ಅಷ್ಟರಲ್ಲಿ ಈ ಜಾನುವಾರುಗಳಿಂದ ಸಂಗ್ರಹಿಸಿದ ಹಾಲಿನಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಇದನ್ನು ಕೂಡಲೇ ಬಿಸಿ ಮಾಡಿ ಸೇವಿಸಿದರೆ ಸಾಂಕ್ರಾಮಿಕ ರೋಗಗಳು ನಾಶವಾಗುವ ಸಾಧ್ಯತೆ ಇರುತ್ತದೆ. ಆದರೆ ಇದನ್ನು ಹೆಚ್ಚು ದಿನ ರೆಫ್ರಿಜರೇಟರ್ ನಲ್ಲಿ ಸಂಗ್ರಹಿಸಿದಾಗ ಈ ಸಾಂಕ್ರಾಮಿಕ ರೋಗಳು ಬಲಿಷ್ಠವಾಗಿ ಮಾನವರ ದೇಹ ಸೇರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.
ಹಸಿ ಹಾಲು ಸೇವಿಸುವುದು ಅಥವಾ ಹಸಿ ಹಾಲನ್ನು ಕೆಲವು ದಿನಗಳ ಕಾಲ ಸಂಗ್ರಹಿಸಿ ಸೇವಿಸುವುದರಿಂದ ರೋಗಗಳು ಹರಡಿರುವ ಸಾಕಷ್ಟು ಉದಾಹರಣೆಗಳು ಇವೆ ಎಂದು ಅಧ್ಯಯನದ ಹಿರಿಯ ಲೇಖಕ ಅಲೆಕ್ಸಾಂಡ್ರಿಯಾ ಬೋಹ್ಮ್ ಹೇಳಿದರು.
14 ದಶಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ವಾರ್ಷಿಕವಾಗಿ ಹಸಿ ಹಾಲನ್ನು ಸೇವಿಸುತ್ತಾರೆ. ಪಾಶ್ಚರೀಕರಿಸಿದ ಹಾಲು ಅಲ್ಲದೇ ಶೈತ್ಯೀಕರಿಸಿದ ಹಾಲು ಕೂಡ ಹೆಚ್ಚಾಗಿ ಸೇವಿಸುತ್ತಾರೆ. ಇವರನ್ನು ಸಂಶೋಧನೆಗೆ ಒಳಪಡಿಸಿದಾಗ ಹಲವರಲ್ಲಿ ಸಮಸ್ಯೆ ಕಂಡು ಬಂದಿದೆ.
ಹಸಿ ಹಾಲು ಅಥವಾ ರೆಫ್ರಿಜರೇಟರ್ ಗಳಲ್ಲಿ ಹಲವು ದಿನಗಳ ಕಾಲ ಇರಿಸಿದ ಹಾಲನ್ನು ಸೇವಿಸುವುದರಿಂದ ೨೦೦ಕ್ಕೂ ಹೆಚ್ಚು ರೋಗಗಳಿಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಇದೊಂದು ಅತ್ಯಂತ ಗಂಭೀರವಾದ ವಿಷಯವಾಗಿದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.
ಹಸಿ ಹಾಲಿನಲ್ಲಿ ಸಾಂಕ್ರಾಮಿಕ ರೋಗ ಹರಡುವ ಪ್ರಭಾವ ಬೀರುವ ವೈರಸ್ ಗಳ ಪ್ರಮಾಣ ಹೆಚ್ಚಾಗಿರುತ್ತದೆ ಎಂದು ಅಧ್ಯಯನದ ಸಹ-ಪ್ರಮುಖ ಲೇಖಕ ಮೆಂಗ್ಯಾಂಗ್ ಜಾಂಗ್, ಸಿವಿಲ್ ಮತ್ತು ಪರಿಸರ ಎಂಜಿನಿಯರಿಂಗ್‌ನಲ್ಲಿ ಪೋಸ್ಟ್ ಡಾಕ್ಟರಲ್ ತಜ್ಞ ವಿವರಿಸಿದ್ದಾರೆ.
ಅಮೆರಿಕದಲ್ಲಿ ಮಾತ್ರ, ಫ್ಲೂ, ವೈರಸ್‌ಗಳು 40 ದಶಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲುತ್ತವೆ. ಮತ್ತು ಪ್ರತಿ ವರ್ಷ 50,000ಕ್ಕಿಂತ ಹೆಚ್ಚು ಜನರನ್ನು ಕೊಲ್ಲುತ್ತವೆ. 2009-2010ರಲ್ಲಿ ಜಾಗತಿಕವಾಗಿ 1.4 ಶತಕೋಟಿ ಮಾನವ ಸೋಂಕುಗಳಿಗೆ ಕಾರಣವಾದ ಹಂದಿ ಜ್ವರದ ಸಂದರ್ಭದಲ್ಲಿ ಈ ರೀತಿಯ ವೈರಸ್‌ಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದು.