ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ಏರ್ ಇಂಡಿಯಾ ಪ್ರಯಾಣದ ವೇಳೆ ಪ್ರಯಾಣಿಕನಿಗೆ ನೀಡಲಾದ ಆಹಾರದಲ್ಲಿ ಬ್ಲೇಡ್ ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕಳೆದ ವಾರ ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ಏರ್ ಇಂಡಿಯಾದ 175 ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಮ್ಯಾಥ್ಯೂರೆಸ್ ಪಾಲ್ ಎಂಬುವವರಿಗೆ ನೀಡಲಾದ ಭೋಜನದಲ್ಲಿ ಬ್ಲೇಡ್ ಪತ್ತೆಯಾಗಿದೆ.
ಪಾಲ್ ಈ ಆಘಾತಕಾರಿ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮಗೆ ನೀಡಲಾದ ಊಟದಲ್ಲಿದ್ದ ಹುರಿದ ಸ್ವೀಟ್ ಪೊಟೆಟೊ ಮತ್ತು ಫಿಗ್ ಚಾಟ್ ನಲ್ಲಿ ಬ್ಲೇಡ್ ಪತ್ತೆಯಾಗಿದೆ. ಆಹಾರ ಬಾಯಲ್ಲಿ ಇಟ್ಟುಕೊಂಡಿದ್ದಾಗ ಬ್ಲೇಡ್ ಸಿಕ್ಕಿದೆ. ಬಾಯಿಂದ ತೆಗೆದು ನೋಡಿದಾಗ ಅದು ಬ್ಲೇಡ್ ಎಂದು ತಿಳಿದು ಆಘಾತವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ಏರ್ ಇಂಡಿಯಾದ ಸಿಬ್ಬಂದಿ ತರಕಾರಿ ಕತ್ತರಿಸಲು ಚಾಕು ಬಳಸುತ್ತಾರೆ ಎಂದುಕೊಂಡಿದ್ದೆ. ಬ್ಲೇಡ್ ನಲ್ಲಿ ಬಳಸಿದ್ದರಿಂದ ಹೀಗೆ ಆಗಿರಬಹುದು ಎಂದು ನಾನು ಊಹಿಸಿಕೊಂಡಿದ್ದೇನೆ. ನಾನು ಆಹಾರ ಬಾಯಲ್ಲಿ ಹಾಕಿಕೊಂಡು ಅಗೆದು ಕೆಲವು ಸೆಕೆಂಡ್ ಗಳ ನಂತರ ನನಗೆ ಗಟ್ಟಿಯಾದ ವಸ್ತು ಅರಿವಿಗೆ ಬಂದಿದ್ದರಿಂದ ತೆಗೆದು ನೋಡಿದೆ. ಅದೃಷ್ಟವಶಾತ್ ನನಗೆ ಯಾವುದೇ ಗಾಯ ಅಥವಾ ಸಮಸ್ಯೆ ಆಗಲಿಲ್ಲ. ಒಂದು ವೇಳೆ ಹೊಟ್ಟೆ ಸೇರಿದ್ದರೆ ಏನಾಗುತ್ತಿತ್ತು ಎಂದು ನೆನಸಿಕೊಂಡರೆ ಭಯವಾಗುತ್ತದೆ ಎಂದು ಪಾಲ್ ವಿವರಿಸಿದ್ದಾರೆ.