ನವದೆಹಲಿ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ದಿನೇದಿನೆ ರಂಗೇರುತ್ತಿದೆ. ಈ ಮಧ್ಯೆ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಏರುವ ಅರವಿಂದ ಕೇಜ್ರಿವಾಲರ ಬಯಕೆಗೆ ಇಂಡಿಯಾ ಅಂಗ ಪಕ್ಷಗಳು ಬೆಂಬಲ ಸೂಚಿಸಿವೆ.
ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ತಮ್ಮ ಪಕ್ಷವನ್ನು ಬೆಂಬಲಿಸಲಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಬುಧವಾರ ಘೋಷಿಸಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಹೊರತಾಗಿ ಇಂಡಿಯಾ ಬಣದ ಅಂಗಪಕ್ಷಗಳಾದ ಟಿಎಂಸಿ, ಶಿವಸೇನೆ ಮತ್ತು ಸಮಾಜವಾದಿ ಪಕ್ಷಗಳು ಆಪ್ಗೆಬೆಂಬಲ ಸೂಚಿಸಿವೆ.
ಇದಲ್ಲದೆ, ಶಿವಸೇನೆ (ಯುಬಿಟಿ) ಮುಂದಿನ ಕೆಲವು ದಿನಗಳಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿಯನ್ನು ಬೆಂಬಲಿಸಿ ಪ್ರಚಾರ ಮಾಡಲು ಯೋಜಿಸುತ್ತಿದೆ. ಕೇಜ್ರಿವಾಲ್ ಅವರು ಉದ್ಧವ್ ಠಾಕ್ರೆ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶೇಷವೆಂದರೆ, 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ನ ಜೊತೆ ಮೈತ್ರಿ ಮಾಡಿಕೊಂಡ ನಂತರ ಎಎಪಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ.
ಆಡಳಿತಾರೂಢ ಎಎಪಿ 2015 ಮತ್ತು 2020 ರ ಚುನಾವಣೆಯಲ್ಲಿ ಕ್ರಮವಾಗಿ 67 ಮತ್ತು 62 ಸ್ಥಾನಗಳೊಂದಿಗೆ ಜಯಗಳಿಸಿದೆ ಮತ್ತು ರಾಜಧಾನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಗುರಿ ಹೊಂದಿದೆ.
ಕಲ್ಯಾಣ ಯೋಜನೆಗಳ ಭರವಸೆಗಳೊಂದಿಗೆ ಜನರನ್ನು ದಾರಿತಪ್ಪಿಸಲಾಗುತ್ತಿದ್ದು, ಅರವಿಂದ್ ಕೇಜ್ರಿವಾಲ್ ವಿರುದ್ಧ ದೂರು ದಾಖಲಿಸಿದ ನಂತರ ಕಾಂಗ್ರೆಸ್ ಅನ್ನು ಮೈತ್ರಿಕೂಟದಿಂದ ಹೊರಗಿಸುವಂತೆ ಆಪ್ ಇಂಡಿಯಾ ಘಟಕ ಪಕ್ಷಗಳಿಗೆ ಕರೆ ನೀಡಿದ್ದರು.
ಏತನ್ಮಧ್ಯೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಶ್ನ ಉನ್ನತ ನಾಯಕರು ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರದಿಂದ ದೂರ ಉಳಿದಿರುವುದು ಕಾರ್ಯಕರ್ತರ ಉತ್ಸಾಹ ಕುಗ್ಗಿಸಿದೆ.
ಬದಲಾಗಿ, ಕಾಂಗ್ರೆಸ್ ಪ್ರಚಾರವು ಇತರ ರಾಜ್ಯಗಳಿಂದ ಕರೆತರಲಾದ ತನ್ನ ಎರಡನೇ ಹಂತದ ನಾಯಕರು ಮತ್ತು ಸಂಸದರ ಮೇಲೆ ಹೆಚ್ಚು ಅವಲಂಬಿತವಾಗಿದೆ.
70 ಸದಸ್ಯರ ದೆಹಲಿ ವಿಧಾನಸಭೆಗೆ ಫೆಬ್ರವರಿ 5 ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8ರಂದು ಮತ ಎಣಿಕೆ ನಡೆಯಲಿದೆ.