12 ವರ್ಷಗಳ ನಂತರ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಸೋಮವಾರ ಅದ್ಧೂರಿ ಚಾಲನೆ ನೀಡಲಾಗಿದ್ದು, ಮೊದಲ ದಿನವೇ ತ್ರಿವಳಿ ಸಂಗಮದಲ್ಲಿ 60 ಲಕ್ಷ ಭಕ್ತರು ಮಿಂದೆದಿದ್ದಾರೆ.
ಪ್ರಯಾಗ್ ರಾಜ್ ನಲ್ಲಿ ಸೋಮವಾರ ಗಂಗಾ, ಸರಸ್ವತಿ ಮತ್ತು ಯಮುನಾ ನದಿಗಳ ತ್ರಿವಳಿ ಸಂಗಮದಲ್ಲಿ ಲಕ್ಷಾಂತರ ಜನರು ಮಿಂದೆದಿದ್ದು, 40 ಕೋಟಿ ಜನರು ಭೇಟಿ ನೀಡುವ ನಿರೀಕ್ಷೆ ಇದೆ. ಇದು ಅಮೆರಿಕ ಮತ್ತು ರಷ್ಯಾದ ಜನಸಂಖ್ಯೆಗಿಂತ ದೊಡ್ಡದು.
ಉತ್ತರ ಪ್ರದೇಶ ಸರ್ಕಾರ ಕೇಂದ್ರದ ಸಹಕಾರದೊಂದಿಗೆ ಸಾವಿರಾರು ಕೋಟಿ ರೂ. ವಿನಿಯೋಗಿಸಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿದೆ. 45 ದಿನಗಳ ಮಹೊತ್ಸವಕ್ಕೆ 7000 ಕೋಟಿ ರೂ. ನೀಡಿದ್ದು, 4000 ಹೆಕ್ಟೇರ್ ಪ್ರದೇಶದಲ್ಲಿ ಸಾವಿರಾರು ಶಿಬಿರಗಳು, ರಸ್ತೆಗಳ ಅಭಿವೃದ್ಧಿ ಮಾಡಿದೆ.
ಕುಂಭಮೇಳದಿಂದ ಉತ್ತರ ಪ್ರದೇಶ ಸರ್ಕಾರ 2 ಲಕ್ಷ ಕೋಟಿ ರೂ. ಆದಾಯ ನಿರೀಕ್ಷಿಸಿದೆ. 40 ಕೊಟಿ ಭಕ್ತರು ಕನಿಷ್ಠ 5 ಸಾವಿರ ರೂ. ವೆಚ್ಚ ಮಾಡಿದರೂ 2 ಲಕ್ಷ ಕೋಟಿ ರೂ. ಆದಾಯ ಬರುತ್ತದೆ ಎಂದು ನಿರೀಕ್ಷಿಸಲಾಗಿದೆ. ಒಂದು ವೇಳೆ 10 ಸಾವಿರ ರೂ. ವೆಚ್ಚ ಮಾಡಿದರೆ 4 ಲಕ್ಷ ಕೋಟಿ ರೂ. ವಹಿವಾಟು ನಡೆಯಲಿದೆ.
ಉತ್ತರ ಪ್ರದೇಶದ ವಾರ್ಷಿಕ ಬಜೆಟ್ 1.2 ಲಕ್ಷ ಕೋಟಿ ರೂ. ಆಗಿದ್ದು, ಇದರ ಎರಡು ಪಟ್ಟು ವಹಿವಾಟು ಕುಂಭಮೇಳದಲ್ಲಿ ನಡೆಯಲಿದೆ. ಸುಮಾರು ೨೪ ಕೋಟಿ ಭಕ್ತರು ಮೇಳದ ನಂಟು ಹೊಂದಿದ್ದಾರೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಕುಡಿಯುವ ನೀರು, ಬಿಸ್ಕತ್, ಊಟ, ಉಪಹಾರ ಜ್ಯೂಸ್ ಮುಂತಾದ ಒಂದು ದಿನದ ಪ್ಯಾಕೇಜ್ ಗೆ ೨೦ ಸಾವಿರ ರೂ. ವೆಚ್ಚವಾಗಲಿದೆ ಎಂದು ಹೇಳಿದೆ.
ತಾತ್ಕಾಲಿಕ ಶಿಬಿರಕ್ಕೆ ದಿನಕ್ಕೆ 3000 ರೂ. ವೈದ್ಯಕೀಯ ವೆಚ್ಚಕ್ಕಾಗಿ 1000 ರೂ. ಖರ್ಚು ಆಗಬಹುದು. ಇದರ ಒಟ್ಟಾರೆ ವೆಚ್ಚದಿಂದ ಉತ್ತರ ಪ್ರದೇಶದ ಸರ್ಕಾರದ ಬಜೆಟ್ ಗಿಂತ ಎಷ್ಟೊ ಪಟ್ಟು ವಹಿವಾಟು ನಡೆಯಲಿದೆ ಎಂದು ಹೇಳಲಾಗಿದೆ.
ಭದ್ರತೆ
ಕುಂಭ ಮೇಳದಲ್ಲಿ ತ್ರಿವಳಿ ಸಂಗಮದಲ್ಲಿ ಪವಿತ್ರಾ ಸ್ನಾನ ಮಾಡುವಾಗ ಅನಾಹುತ ಸಂಭವಿಸಬಾರದು ಎಂಬ ಕಾರಣಕ್ಕೆ ನೀರಿನಾಳದಲ್ಲಿ ಡ್ರೋಣ್ ವ್ಯವಸ್ಥೆ ಮಾಡಲಾಗಿದೆ.