ತೃತೀಯ ಲಿಂಗಿ ಜೊತೆ ಮದುವೆಗೆ ಮುಂದಾದ ಮಗನ ನಿರ್ಧಾರದಿಂದ ಬೇಸತ್ತ ತಂದೆ-ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ನಂದ್ಯಾಲ್ ಜಿಲ್ಲೆಯಲ್ಲಿ 23 ವರ್ಷದ ಮಗ ತೃತೀಯ ಲಿಂಗಿಯನ್ನು ಮದುವೆ ಆಗಲು ಮುಂದಾಗಿದ್ದರಿಂದ 45 ವರ್ಷದ ತಂದೆ ಸುಬ್ಬ ರಾಯುಡು ಹಾಗೂ 38 ವರ್ಷದ ತಾಯಿ ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತೃತೀಯ ಲಿಂಗಿ ಸಮುದಾಯದ ಜೊತೆ ಕಳೆದ 3 ವರ್ಷಗಳಿಂದ ಸಂಪರ್ಕ ಹೊಂದಿದ್ದ ಮಗ ಸುನೀಲ್ ಇತ್ತೀಚೆಗೆ ಅವರಲ್ಲಿ ಒಬ್ಬರನ್ನು ಮದುವೆ ಆಗುವುದಾಗಿ ಪಟ್ಟು ಹಿಡಿದಿದ್ದ. ಮಗನ ನಿರ್ಧಾರದಿಂದ ಮನೆಯಲ್ಲಿ ಪದೇಪದೆ ಜಗಳ ಆಗುತ್ತಿದ್ದು, ಮಗ ಪಟ್ಟು ಬಿಡದ ಕಾರಣ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಸುನೀಲ್ ತೃತೀಯ ಲಿಂಗಿ ಜೊತೆ ಸಂಬಂಧ ಹೊಂದಿದ್ದು, ಅವರ ಜೊತೆ ಮದುವೆ ಆಗಲು ಮನೆಯಲ್ಲಿ ಒಪ್ಪದೇ ಇರುವ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದ. ಈ ಬಾರಿ ಮಗನನ್ನು ಕಳೆದುಕೊಳ್ಳುವ ಭೀತಿಯಿಂದ ತಾವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದಲ್ಲದೇ ಸುನೀಲ್ ತೃತೀಯ ಲಿಂಗಿಯಿಂದ 1.5 ಲಕ್ಷ ರೂ. ಸಾಲ ಮಾಡಿದ್ದು, ಅದನ್ನು ಹಿಂತಿರುಗಿಸಿರಲಿಲ್ಲ. ಇದರಿಂದ ತೃತೀಯ ಲಿಂಗಿಗಳು ಮನೆ ಮುಂದೆ ಬಂದು ಗಲಾಟೆ ಭಾರೀ ಜನರ ಮುಂದೆ ಅಪಮಾನ ಮಾಡಿದ್ದರು ಎಂದು ಸ್ಥಳೀಯ ಪೊಲೀಸರು ವಿವರಿಸಿದ್ದಾರೆ.