ಸಿಸಿಟಿವಿ ಮತ್ತು ಇತರ ಚುನಾವಣಾ ಸಂಬಂಧಿತ ದಾಖಲೆಗಳನ್ನು ಸಾರ್ವಜನಿಕರಿಗೆ ನೀಡದ ಸರಕಾರದ ಕ್ರಮದ ವಿರುದ್ಧ ಸಲ್ಲಿಸಲಾಗಿರುವ ಅರ್ಜೀಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದಿಂದ ಈ ಕುರಿತು ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು, ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಅವರ ವಾದಗಳನ್ನು ಪರಿಗಣಿಸಿ, ಅರ್ಜಿಯ ಮೇಲೆ ನೋಟಿಸ್ ಜಾರಿಗೊಳಿಸಿದೆ.
ಮಾರ್ಚ್ 17ರಿಂದ ಆರಂಭವಾಗುವ ವಾರದಲ್ಲಿ ಅರ್ಜಿಯ ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ.
ಮತದಾನದ ಪ್ರಕ್ರಿಯೆಗೆ ಸಂಬಂಧಿಸಿದ ಸಿಸಿಟಿವಿ ಕ್ಯಾಮೆರಾ ಮತ್ತು ವೆಬ್ಕಾಸ್ಟಿಂಗ್ ದೃಶ್ಯಾವಳಿಗಳು ಹಾಗೂ ಅಭ್ಯರ್ಥಿಗಳ ವಿಡಿಯೊ ರೆಕಾರ್ಡಿಂಗ್‌ಗಳಂತಹ ಕೆಲವು ಎಲೆಕ್ಟ್ರಾನಿಕ್ ದಾಖಲೆಗಳ ಸಾರ್ವಜನಿಕ ತಪಾಸಣೆಯನ್ನು ತಡೆಯಲು ಸರ್ಕಾರವು ಚುನಾವಣಾ ನಿಯಮವನ್ನು ತಿರುಚಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆ ಹೊತ್ತಿರುವ ಸಾಂವಿಧಾನಿಕ ಸಂಸ್ಥೆ. ಹೀಗಾಗಿ ಏಕಪಕ್ಷೀಯವಾಗಿ ಮತ್ತು ಮಾತುಕತೆ ಇಲ್ಲದೆ ಇಂತಹ ತಿದ್ದುಪಡಿ ಮಾಡಲು ಬಿಡಬಾರದು ಎಂದು ರಮೇಶ್ ಹೇಳಿದ್ದರು.
ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿಸುವ ಅಗತ್ಯ ಮಾಹಿತಿ ಸಾರ್ವಜನಿಕರಿಗೆ ಸಿಗದಂತೆ ತಿದ್ದುಪಡಿ ಮೂಲಕ ನಿರ್ಬಂಧಿಸಲಾಗಿದೆ ಎಂದಿದ್ದರು.
ಚುನಾವಣಾ ಆಯುಕ್ತರ ಸಮರ್ಥನೆ
ಚುನಾವಣಾ ನಿಯಮಗಳಿಗೆ ತಿದ್ದುಪಡಿ ತಂದಿರುವುದನ್ನು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್, ಬಲವಾಗಿ ಸಮರ್ಥಿಸಿಕೊಂಡಿದ್ದರು.
`ಮತದಾರರ ಖಾಸಗಿತನ ರಕ್ಷಿಸುವ ಉದ್ದೇಶದಿಂದ ಮತಗಟ್ಟೆಯಲ್ಲಿನ ಸಿ.ಸಿ.ಟಿವಿ ದೃಶ್ಯಗಳನ್ನು ಸಾರ್ವಜನಿಕ ಪರಿಶೀಲನೆಗೆ ಒಳಪಡಿಸುವುದನ್ನು ನಿರ್ಬಂಧಿಸಲಾಗಿದೆ. `ಮತಗಟ್ಟೆಗೆ ಸಂಬಂಧಿಸಿದ ದತ್ತಾಂಶಗಳ ಬಳಸಿ, ಸುಳ್ಳು ಸಂಕಥನ ಸೃಷ್ಟಿಸುವುದನ್ನು ತಡೆಯುವ ಉದ್ದೇಶದಿಂದಲೂ ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದಿದ್ದರು.
10.5 ಲಕ್ಷ ಮತಗಟ್ಟೆಗಳಲ್ಲಿ 10 ಗಂಟೆಯಷ್ಟು ಮತದಾನ ನಡೆಯುತ್ತದೆ. ಅಂದರೆ, ಅಂದಾಜು ಒಂದು ಕೋಟಿ ಗಂಟೆಗಳಷ್ಟು ದತ್ತಾಂಶ ಸಂಗ್ರಹವಾಗುತ್ತದೆ. ಒಬ್ಬ ವ್ಯಕ್ತಿ ದಿನಕ್ಕೆ 8 ಗಂಟೆ ಈ ದತ್ತಾಂಶ ವೀಕ್ಷಿಸುತ್ತಾನೆ ಅಂದುಕೊಂಡರೂ, ಎಲ್ಲ ದೃಶ್ಯಗಳನ್ನು ವೀಕ್ಷಿಸಲು ಆತನಿಗೆ 3.600 ವರ್ಷ ಬೇಕಾಗುತ್ತದೆ ಎಂದರು.