Friday, May 15, 2026
Google search engine
Homeರಾಜ್ಯರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲ: ಸಚಿವ ಕೆಎಚ್ ಮುನಿಯಪ್ಪ ಭರವಸೆ

ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲ: ಸಚಿವ ಕೆಎಚ್ ಮುನಿಯಪ್ಪ ಭರವಸೆ

ಬೆಂಗಳೂರು: ಗೃಹ ಬಳಕೆಯ ಎಲ್​ಪಿಜಿ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ವಾಣಿಜ್ಯ ಎಲ್​ಪಿಜಿ ಸರಬರಾಜಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆಯುಂಟಾಗಿದ್ದು, ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಭರವಸೆ ನೀಡಿದ್ದಾರೆ.

ನಗರದಲ್ಲಿ ಬುಧವಾರ ತೈಲ ಕಂಪನಿಗಳಾದ ಐಒಸಿ, ಬಿಪಿಸಿ, ಹೆಚ್ ಪಿಸಿ, ಗೈಲ್ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್ – ಇಸ್ರೇಲ್ ದೇಶಗಳ ಮಧ್ಯೆ ಯುದ್ದ ನಡೆಯುತ್ತಿರುವ ಕಾರಣ ಅನಿಲದ ವೆಸೆಲ್ (ಶಿಪ್​ಗಳಿಗೆ) ಹಾನಿ ಉಂಟಾದ ಹಿನ್ನೆಲೆ ನಮಗೆ ಅನಿಲ ಸಮಸ್ಯೆ ಉಂಟಾಗಿದೆ. ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದರು.

ಅರಬ್ ರಾಷ್ಟ್ರಗಳಾದ ಯುಎಸ್ಎ, ಗಲ್ಪ್, ರಷ್ಯಾದಿಂದ ನಮ್ಮ ದೇಶಕ್ಕೆ ಅನಿಲ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಸುಮಾರು 1000 ಮೆಟ್ರಿಕ್ ಟನ್ ಅಂದ್ರೆ ಒಂದು ದಿನಕ್ಕೆ ಸುಮಾರು 50,000 ಕಮರ್ಷಿಯಲ್ ಸಿಲಿಂಡರ್ಸ್ (19 ಕೆಜಿ) ಬೇಕಾಗುತ್ತದೆ. ಡೊಮೆಸ್ಟಿಕ್ ಬಳಕೆಗೆ ಸುಮಾರು 5,000 ಮೆಟ್ರಿಕ್ ಟನ್ ಅಂದ್ರೆ ದಿನಕ್ಕೆ ಸುಮಾರು 3.50 ಲಕ್ಷ ಸಿಲಿಂಡರ್ ಗಳು (14.2 ಕೆಜಿ) ರಾಜ್ಯಕ್ಕೆ ಬೇಕಾಗುತ್ತದೆ ಎಂದು ಅವರು ಹೇಳಿದರು.

ಭಾರತದಲ್ಲಿ ಸುಮಾರು ಶೇ.30 ಮಾತ್ರ ಉತ್ಪಾದನೆ ಇದೆ. ಉಳಿದ ಶೇ. 60 ರಿಂದ 70ರಷ್ಟು ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ. ಅಮೆರಿಕ, ಗಲ್ಫ್ , ಅರೇಬಿಯನ್ ಮತ್ತು ರಷ್ಯಾ ದೇಶಗಳಿಂದ ಆಮದು ಬರುತ್ತಿದೆ. ಈಗ ಯುದ್ಧ ಪರಿಸ್ಥಿತಿಯಿಂದ ಹಡಗು ಬರುವುದು ಸ್ವಲ್ಪ ತಡವಾಗುತ್ತಿದೆ. ಆದರೂ ಜನರು ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದರು.

ಅನಗತ್ಯವಾಗಿ ಸಿಲಿಂಡರ್ ಬುಕ್ ಮಾಡಬೇಡಿ

ಕೇಂದ್ರ ಸರ್ಕಾರದ ಸೂಚನೆಯಂತೆ ಒಂದು ಕುಟುಂಬದ ಬಳಕೆಗೆ 25 ದಿನಕ್ಕೆ ಒಂದು ಸಿಲಿಂಡರ್ ನೀಡಲಾಗುತ್ತದೆ. ಆತಂಕಪಟ್ಟು ಗ್ರಾಹಕರು ಹೆಚ್ಚು ಹೆಚ್ಚು ಸಿಲಿಂಡರ್ ಬುಕ್ ಮಾಡಬಾರದು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರ ಮತ್ತು ಆಯಿಲ್ ಕಂಪನಿಗಳ ಜೊತೆ ಸಹಕರಿಸಬೇಕು ಎಂದು ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. ಕಮರ್ಷಿಯಲ್ ಬಳಕೆಯಲ್ಲಿ ಸ್ವಲ್ಪ ಕಷ್ಟವಾಗಬಹುದು. ಏಕೆಂದರೆ ಮೊದಲು ಮನೆ ಬಳಕೆಗೆ ಆದ್ಯತೆ ನೀಡುತ್ತೇವೆ. ಕಮರ್ಷಿಯಲ್‌ ಸಿಲಿಂಡರ್ ವಿಚಾರದಲ್ಲಿ ಅತ್ಯಂತ ಹೆಚ್ಚು ಆದ್ಯತೆ ಮೇರೆಗೆ ಆಸ್ಪತ್ರೆ, ಶಾಲೆ, ಕಾಲೇಜುಗಳಿಗೆ ಸರಬರಾಜುನಲ್ಲಿ ವ್ಯತ್ಯಯ ಆಗದಂತೆ ನೋಡಿಕೊಂಡು ನಂತರ ಹೋಟೆಲ್, ಕಲ್ಯಾಣ ಮಂಟಪಗಳಿಗೆ ಕಷ್ಟ ಇದ್ದು ಆದ್ಯತೆಯ ಮೇರೆಗೆ ಸಿಲಿಂಡರ್ ಗಳನ್ನು ವಿತರಿಸಲಾಗುವುದು ಎಂದರು.

ಅವಶ್ಯಕತೆಯಿದ್ದರೆ ಬಳಸಿ:

ನಿರಂತರವಾಗಿ ಪರಿಶೀಲಿಸಲು ಸರ್ಕಾರದ ಕಾರ್ಯದರ್ಶಿ ನೇತ್ರತ್ವದಲ್ಲಿ ಪ್ರತಿ ವಾರ ತೈಲ ಕಂಪನಿಗಳ ಜೊತೆ ಸಭೆ ನಡೆಸಲು ಸೂಚಿಸಿದ್ದು, ಜನರು ಆತಂಕ ಪಡದೇ ಮಿತವಾಗಿ ಉಪಯೋಗಿಸಿದರೆ ಯಾವುದೇ ದೊಡ್ಡ ಸಮಸ್ಯೆ ಎದುರಾಗುವುದಿಲ್ಲ‌‌. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ ಸಹಕರಿಸಿದರೆ ಸಮಸ್ಯೆಗಳನ್ನು ಸರಿಪಡಿಸಲು ಅನುಕೂಲವಾಗುತ್ತದೆ ಎಂದರು.

ನಮ್ಮಲ್ಲಿ ಅನಿಲ ಉತ್ಪಾದನೆ ಕಡಿಮೆ ಇದೆ. ಗ್ಯಾಸ್ ಸಿಲಿಂಡರ್ ಬಳಕೆ ಹೆಚ್ಚಾಗಿದ್ದು, ಒಂದು ಸಿಲಿಂಡರ್ 4 ಸದಸ್ಯರಿರುವ ಒಂದು ಕುಟುಂಬಕ್ಕೆ 21 ದಿನಕ್ಕೆ ಸಾಕಾಗುತ್ತದೆ. ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಲಾಗುತ್ತದೆ. ಗ್ರಾಹಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments