ಪೆಹಲ್ಗಾಮ್ ದಾಳಿ ಬಗ್ಗೆ ಪ್ರಧಾನಿ ಮೋದಿಗೆ ಮೊದಲೇ ಗೊತ್ತಿತ್ತು. ಆದರೂ ಅವರು ಯಾಕೆ ಭದ್ರತೆ ಹೆಚ್ಚಿಸಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏಪ್ರಿಲ್ 19ರಂದು ಕಾಶ್ಮೀರಕ್ಕೆ ಪ್ರಧಾನಿ ಭೇಟಿ ಸಂದರ್ಭದಲ್ಲಿ ಅವರ ಹತ್ಯಗೆ ಉಗ್ರರು ಸಂಚು ರೂಪಿಸಿದ್ದರು. ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಮೋದಿ ಪ್ರವಾಸ ರದ್ದುಗೊಳಿಸಿದ್ದರು ಎಂದರು.
ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕಾಶ್ಮೀರ ಪ್ರವಾಸ ರದ್ದುಗೊಳಿಸಿದರು. ಆದರೆ ಆದರೆ ಭದ್ರತೆ ಹೆಚ್ಚಿಸದೇ ನಿರ್ಲಕ್ಷ್ಯ ವಹಿಸಿದರು. ಇದರಿಂದ ಉಗ್ರರು ಪೆಹಲ್ಗಾಮ್ ನಲ್ಲಿ ಮುಗ್ಧರ ಹತ್ಯೆ ನಡೆಸಿದರು ಎಂದು ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದರು.
ಪೆಹಲ್ಗಾಮ್ ದಾಳಿಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಉಗ್ರರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಾವು ಬೆಂಬಲ ನೀಡಿದ್ದೇವೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿಗೆ ಉಗ್ರರ ದಾಳಿಯ ಬಗ್ಗೆ ಗುಪ್ತಚರ ಇಲಾಖೆಯಿಂದ 3 ದಿನಗಳ ಮುಂಚಿತವಾಗಿಯೇ ಮಾಹಿತಿ ಇತ್ತು. ಈ ಕಾರಣದಿಂದ ಪ್ರವಾಸ ರದ್ದುಗೊಳಿಸಿದ್ದರು.
ಕೇಂದ್ರ ಸರ್ಕಾರ ಗುಪ್ತಚರ ಇಲಾಖೆ ಮೇಲೆ ಗೂಬೆ ಕೂರಿಸುತ್ತಿದೆ. ಆದರೆ ಗುಪ್ತಚರ ಇಲಾಖೆ ಸಮರ್ಪಕ ಮಾಹಿತಿ ನೀಡಿದೆ. ಆದರೆ ಯಾವುದೇ ಮುಂಜಾಗೃತಾ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರ ದಾಳಿಯನ್ನು ನಿರೀಕ್ಷಿಸಿತ್ತು. ಮತ್ತು ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವ ಯೋಜನೆಯನ್ನು ರೂಪಿಸಿಕೊಂಡಿತ್ತು ಎಂಬ ಅನುಮಾನ ಬರುತ್ತಿದೆ. ಇದಕ್ಕೆ ಕಾರಣ ಕೇಂದ್ರದ ನಡವಳಿಕೆ ಎಂದು ಅವರು ವಿವರಿಸಿದರು.
ದಾಳಿಯ ಮುನ್ಸೂಚನೆ ಮೂರು ದಿನದ ಮುಂಚಿತವಾಗಿಯೇ ತಿಳಿದಿದ್ದರು ಯಾಕೆ ಜನರ ರಕ್ಷಣೆಗೆ ಕ್ರಮ ಕೈಗೊಳ್ಳಲಿಲ್ಲ. ಪೆಹಲ್ಗಾಮ್ ನಲ್ಲಿ ಮಾತ್ರ ಯಾಕೆ ಭದ್ರತೆ ಕಡಿಮೆ ಮಾಡಲಾಗಿತ್ತು? ಇದು ನನಗೆ ಮಾಧ್ಯಮಗಳ ವರದಿ ನೋಡಿಯೇ ತಿಳಿದಿದ್ದು ಎಂದು ಖರ್ಗೆ ಹೇಳಿದರು.



