ಮುಂಬೈ ಇಂಡಿಯನ್ಸ್ ತಂಡದ ನ್ಯಾಟ್ ಸ್ಕೀವಿಯರ್ ಬ್ರಂಟ್ ಡಬ್ಲೂಪಿಎಲ್ ಇತಿಹಾಸದಲ್ಲೇ ಮೊದಲ ಶತಕ ಸಿಡಿಸಿದ ಆಟಗಾರ್ತಿ ಎಂಬ ಇತಿಹಾಸ ಬರೆದಿದ್ದಾರೆ.
ವಡೋದರಾದಲ್ಲಿ ಸೋಮವಾರ ನಡೆದ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ಬ್ರಂಟ್ ಶತಕದ ನೆರವಿನಿಂದ 4 ವಿಕೆಟ್ ಗೆ 199 ರನ್ ಗಳ ಬೃಹತ್ ಮೊತ್ತ ಸಂಪಾದಿಸಿತು. ಫೈನಲ್ ತಲುಪಲು ಮುಂಬೈಗೆ ಈ ಗೆಲುವು ಮುಖ್ಯವಾಗಿದ್ದರೆ, ಈ ಪಂದ್ಯದಲ್ಲಿ ಗೆದ್ದರೆ ಆರ್ ಸಿಬಿ ಫೈನಲ್ ಗೆ ನೇರ ಪ್ರವೇಶ ಪಡೆಯಲಿದೆ.
ಸ್ಕೀವಿಯರ್ ಬ್ರಂಟ್ 57 ಎಸೆತಗಳಲ್ಲಿ 16 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ ಬರೋಬ್ಬರಿ 100 ರನ್ ಪೂರೈಸಿ ಅಜೇಯರಾಗಿ ಉಳಿದರು. ಈ ಮೂಲಕ ಡಬ್ಲೂಪಿಎಲ್ ಇತಿಹಾಸದಲ್ಲೇ ಶತಕ ದಾಖಲಿಸಿದ ಮೊದಲ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು. ಇದಕ್ಕೂ ಮುನ್ನ ಆರ್ ಸಿಬಿ ಪರ ಡಿವೈನ್ 99 ರನ್, ವೋಲ್ ಅಜೇಯ 99 ರನ್ ಬಾರಿಸಿ ನಂತರದ ಸ್ಥಾನದಲ್ಲಿದ್ದಾರೆ.
ಮುಂಬೈ ಇಂಡಿಯನ್ಸ್ ಸಂಜೀವನ್ ಸಂಜನಾ (7) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ ಹ್ಯಾಲೆ ಮ್ಯಾಥ್ಯೂಸ್ ಮತ್ತು ನ್ಯಾಟ್ ಸ್ಕೀವಿಯರ್ ಬ್ಲಂಟ್ ಎರಡನೇ ವಿಕೆಟ್ ಗೆ 136 ಜೊತೆಯಾಟ ನಿಭಾಯಿಸಿದರು. ಮ್ಯಾಥ್ಯೂಸ್ 39 ಎಸೆತಗಳಲ್ಲಿ 9 ಬೌಂಡರಿ ಒಳಗೊಂಡ 56 ರನ್ ಗಳಿಸಿದರು.
ನಂತರ ಬಂದ ನಾಯಕಿ ಹರ್ಮನ್ ಪ್ರೀತ್ ಕೌರ್ (20) ಬಂದಷ್ಟೇ ವೇಗವಾಗಿ ರನ್ ಗಳಿಸುವ ಆತುರದಲ್ಲಿ ವಿಕೆಟ್ ಕೈ ಚೆಲ್ಲಿದರು. ಈ ಹಂತದಲ್ಲಿ ಆರ್ ಸಿಬಿ ಬೌಲರ್ ಗಳು ತಿರುಗೇಟು ನೀಡಿದರೂ ಸ್ಕೀವಿಯರ್ ಏಕಾಂಗಿ ಹೋರಾಟ ಮುಂದುವರಿಸಿ ತಂಡದ ಮೊತ್ತವನ್ನು 200ರ ಗಡಿ ಸಮೀಪ ತಲುಪಿಸಿದರು.



