ದೇಣಿಗೆ ಪಡೆಯುವ ರಾಜಕೀಯ ಪಕ್ಷಗಳ ಪಟ್ಟಿಯಲ್ಲಿ ಬಿಜೆಪಿ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಕಾಂಗ್ರೆಸ್ ಹಿಂದಿಕ್ಕಿದ ಕೆಸಿ ಚಂದ್ರಶೇಖರ್ ನೇತೃತ್ವದ ಬಿಆರ್ ಎಸ್ ಪಕ್ಷ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.
2023-24ನೇ ಸಾಲಿನಲ್ಲಿ ರಾಜಕೀಯ ಪಕ್ಷಗಳಿಗೆ 20 ಸಾವಿರ ಕೋಟಿ ರೂ. ದೇಣಿಗೆ ಮೊತ್ತ ಹರಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನಲ್ಲಿ ಬಿಜೆಪಿಗೆ ಮೂರು ಪಟ್ಟು ಹೆಚ್ಚು ಅಂದರೆ 2224 ಕೋಟಿ ರೂ. ದೇಣಿಗೆ ಹರಿದು ಬಂದಿದೆ.
ತೆಲಂಗಾಣದ ಕೆಸಿ ಚಂದ್ರಶೇಖರ್ ನೇತೃತ್ವದ ಭಾರತ್ ರಾಷ್ಟ್ರೀಯ ಸಮಿತಿ (ಬಿಆರ್ ಎಸ್) ಪಕ್ಷ 580 ಕೋಟಿ ರೂ. ದೇಣಿಗೆ ಸಂಗ್ರಹಿಸುವ ಮೂಲಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಅನ್ನು ಹಿಂದಿಕ್ಕಿ ಬಿಜೆಪಿ ನಂತರ ಅತೀ ಹೆಚ್ಚು ದೇಣಿಗೆ ಪಡೆದ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಾಂಗ್ರೆಸ್ 289 ಕೋಟಿ ದೇಣಿಗೆಯೊಂದಿಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಆದರೆ ಹಿಂದಿನ ವರ್ಷ ಕಾಂಗ್ರೆಸ್ 79.9 ಕೋಟಿ ರೂ. ದೇಣಿಗೆ ಪಡೆದಿತ್ತು. ಕಾಂಗ್ರೆಸ್ ಗೆ ಹೋಲಿಸಿದರೆ ಬಿಜೆಪಿಗೆ ಶೇ.776.82ರಷ್ಟು ಹೆಚ್ಚು ದೇಣಿಗೆ ಗಳಿಸಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಅತೀ ಹೆಚ್ಚು ಮೊತ್ತದ ದೇಣಿಗೆ ನೀಡಿರುವುದು ಪ್ರೌಡೆಂಟ್ ಎಲೆಕ್ಟ್ರೋಲ್ ಟ್ರಸ್ಟ್ ಆಗಿದೆ. ಕೇಂದ್ರ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ನೀಡಿದ ಮಾಹಿತಿ ಪ್ರಕಾರ ಬಿಜೆಪಿ 723 ಕೋಟಿ ರೂ. ಹಾಗೂ ಕಾಂಗ್ರೆಸ್ ಗೆ 156 ಕೋಟಿ ರೂ. ದೇಣಿಗೆ ನೀಡಿದೆ.