10 ಲಕ್ಷ ರೂ. ಸೂಟು, 8400 ಕೋಟಿಯ ವಿಮಾನ, 2700 ಕೋಟಿ ಮೌಲ್ಯದ ಮನೆ ನಿರ್ಮಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಆಡಳಿತದಲ್ಲಿರುವ ಆಮ್ ಆದ್ಮಿ ಪಕ್ಷವನ್ನು ಟೀಕಿಸಿದ್ದರು.
ಆಮ್ ಆದ್ಮಿ ಪಕ್ಷದ ಮುಖಂಡರು ಮದ್ಯ ನೀತಿ ಹಗರಣದಲ್ಲಿ ಮೈರಮರೆತಿದ್ದರಿಂದ ದೆಹಲಿಯಲ್ಲಿ ದುರಂತ ಸಂಭವಿಸಿದೆ. ಜನರು ಗಾಜಿನ ಮನೆಯಲ್ಲಿ ಇರುವಂತಾಗಿದೆ ಎಂದು ಟೀಕಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ದುರಂತ ಸಂಭವಿಸಿರುವುದು ದೆಹಲಿಯಲ್ಲಿ ಅಲ್ಲ. ಬಿಜೆಪಿಯಲ್ಲಿ ಎಂದು ತಿರುಗೇಟು ನೀಡಿದರು.
ದೆಹಲಿ ಚುನಾವಣೆಗೆ ಬಿಜೆಪಿಗೆ ಸಿಎಂ ಅಭ್ಯರ್ಥಿ ಯಾರೂ ಇಲ್ಲ. ದೆಹಲಿ ಅಭಿವೃದ್ಧಿ ಬಗ್ಗೆ ಸ್ಪಷ್ಟ ಅಜೆಂಡಾ ಕೂಡ ಇಲ್ಲ. ದೆಹಲಿ ಚುನಾವಣೆ ಎದುರಿಸಲು ಯಾವ ಸಾಧನೆಗಳೂ ಬೆನ್ನಿಗಿಲ್ಲ ಎಂದು ಮೂರು ಅಂಶದ ಟೀಕೆಯನ್ನು ಕೇಜ್ರಿವಲ್ ಮಾಡಿದರು.
10 ಲಕ್ಷ ರೂ. ಮೌಲ್ಯದ ಸೂಟು, 2700 ಕೋಟಿ ಮೌಲ್ಯದ ಮನೆ ಕಟ್ಟಿಸಿಕೊಳ್ಳುತ್ತಿರುವವರು, 8400 ಕೋಟಿಯ ವಿಮಾನದಲ್ಲಿ ಹಾರಾಡುವವರು ಗಾಜಿನ ಮನೆಯ ಬಗ್ಗೆ ಪ್ರಸ್ತಾಪಿಸಿರುವುದು ವಿಷಾದನೀಯ ಎಂದು ತಿರುಗೇಟು ನೀಡಿದರು.
2020ರ ಚುನಾವಣಾ ಪ್ರಣಾಳಿಕೆಯಲ್ಲಿ 2022ರೊಳಗೆ ಬಿಜೆಪಿ ದೆಹಲಿಯಲ್ಲಿ ಸರ್ವರಿಗೂ ಸ್ವಂತ ಮನೆ ಕಟ್ಟಿಸಿಕೊಡುವುದಾಗಿ ಹೇಳಿದ್ದರು. ಆದರೆ 5 ವರ್ಷ 4700 ಮನೆ ನಿರ್ಮಿಸಿಕೊಡಲು ಆಗಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದರು.