ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ಅಧಿಕೃತವಾಗಿ ದಿನಾಂಕ ಪ್ರಕಟಿಸುವ ಮುನ್ನವೇ ಆಡಳಿತಾರೂಢ ಎಎಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಬಿಜೆಪಿ ಕೂಡ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಅಚ್ಚರಿ ಮೂಡಿಸಿದೆ.
ಪ್ರಧಾನಿ ಮೋದಿ ಶುಕ್ರವಾರ ದೆಹಲಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಂತೆ ಚುನಾವಣಾ ಪ್ರಚಾರಕ್ಕೆ ಕಾವು ಉಂಟಾಗಿದ್ದು, ರಾಜಧಾನಿಯಲ್ಲಿ ಅಧಿಕಾರ ಹಿಡಿಯಲು ಜಿದ್ದಿಗೆ ಬಿದ್ದಿರುವ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಮುಂಚಿತವಾಗಿಯೇ ಪ್ರಕಟಿಸಿವೆ.
ಆಮ್ ಆದ್ಮಿ ಪಕ್ಷದ ಮುಖ್ಯ ಸಂಚಾಲಕ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅವರಿಂದ್ ಕೇಜ್ರಿವಾಲ್ ವಿರುದ್ಧ ಮಾಜಿ ಸಂಸದ ಪರವೇಶ್ ವರ್ಮಾ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಮುಖ್ಯಮಂತ್ರಿ ಅತಿಶಿ ವಿರುದ್ಧ ಕಲ್ಕಜಿ ಕ್ಷೇತ್ರದಿಂದ ಮಾಜಿ ಸಂಸದ ರಮೇಶ್ ಬಿಂಧುರಿಯನ್ನು, ಕರೊಲ್ ಭಾಗ್ ಕ್ಷೇತ್ರದಿಂದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳಾದ ದುಶ್ಯಂತ್ ಕುಮಾರ್ ಗೌತಮ್, ಜನಕಪುರಿಯಿಂದ ಅಶೀಶ್ ಸೂದ್ ಮತ್ತು ಗಾಂಧಿನಗರ್ನಿಂದ ಅರವಿಂದ್ ಸಿಂಗ್ ಲವ್ಲಿಯನ್ನು ಅಖಾಡಕ್ಕೆ ಇಳಿಸಿದೆ.
29 ಸ್ಪರ್ಧಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬಿಜೆಪಿ, ಎಎಪಿ ತೊರೆದು ಇತ್ತೀಚಿಗೆ ಕಮಲ ಪಾಳೆಯ ಸೇರಿದ್ದ ಕೈಲಾಶ್ ಗೆಹ್ಲೋಟ್ ಅವರನ್ನು ಬ್ರಿಜ್ವಸನ್ನಿಂದ ಕಣಕ್ಕೆ ಇಳಿಸಿದೆ.
ಇಬ್ಬರು ಮಹಿಳೆಯರಿಗೆ ಅವಕಾಶ:
ಪಟ್ಟಿಯಲ್ಲಿ ಇಬ್ಬರು ಮಹಿಳೆಯರಿಗೂ ಟಿಕೆಟ್ ನೀಡಲಾಗಿದೆ. ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷರಾದ ಸತೀಶ್ ಉಪಾಧ್ಯಾಯ ಮಲ್ವಿಯಾ ನಗರ್ನಿಂದ, ರಾಜ್ಕುಮಾರ್ ಭಾಟಿಯಾ ಆದರ್ಶನ ನಗರ್ನಿಂದ ಬಡ್ಲಿ ಯಿಂದ ದೀಪಕ್ ಚೌಧರಿ ಮತ್ತು ರೈಥಲದಿಂದ ಕುಲ್ವಂತ್ ರಾಣಾ ಕಣಕ್ಕೆ ಇಳಿಯಲಿದ್ದಾರೆ.
ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಸಿರುವ ಆಮ್ ಆದ್ಮಿ ಪಕ್ಷ (ಎಎಪಿ) ಎಲ್ಲ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇನ್ನು ಕಾಂಗ್ರೆಸ್ ಕೂಡ ಕೆಲವು ನಾಯಕರ ಹೆಸರನ್ನು ಕೂಡ ಪ್ರಕಟಿಸಿದೆ.
ಇದೇ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಮೂರು ಪ್ರಮುಖ ರಾಷ್ಟ್ರೀಯ ಪಕ್ಷಗಳು ಚುನಾವಣೆ ಎದುರಿಸಲು ಸಿದ್ಧತೆ ನಡೆಸಿವೆ. ಚುನಾವಣಾ ದಿನಾಂಕ ಸೇರಿದಂತೆ ಪ್ರಕ್ರಿಯೆ ಕುರಿತು ಚುನಾವಣಾ ಆಯೋಗದಿಂದ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.