ನವದೆಹಲಿ: ಕಾಸಿಗೆ ತಕ್ಕ ಕಜ್ಜಾಯ, ಮುಖ ನೋಡಿ ಮಣೆ ಹಾಕು ಎಂಬುದೆಲ್ಲ ಈಗ ಹಳೆಯ ಮಾತು. ಫೋನ್ ನೋಡಿ ಹಣ ಪೀಕು ಎಂಬುದು ಈಗಿನ ಲೇಟೆಸ್ಟ್ ನುಡಿಗಟ್ಟಾಗಿದೆ.
ದೇಶಾದ್ಯಂತ ತನ್ನ ಜಾಲ ಹೊಂದಿರುವ ಉಬರ್ ಮತ್ತು ಓಲಾ ಅಕ್ಷರಶಃ ಇದೇ ಮಾದರಿಯಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿರುವ ಅಂಶ ಬಯಲಾಗಿದ್ದು, ಎರಡೂ ಸಂಸ್ಥೆಗಳು ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿವೆ.
ಈ ಎರಡೂ ಅಗ್ರಿಗೇಟರುಗಳು ಗ್ರಹಾಕರು ಯಾವ ಫೋನ್ ಬಳಸುತ್ತಾರೆ ಉದಾ: ಐಫೋನ್/ಆಂಡ್ರಾಯ್ಡ್, ಎಂಬುದರ ಮೇಲೆ ದರ ನಿಗದಿ ಮಾಡುವ ದಂಧೆ ಬೆಳಕಿಗೆ ಬಂದಿದೆ.
ಗ್ರಾಹಕರು ಬಳಸುವ ಸ್ಮಾರ್ಟ್ ಫೋನಿನ ಮಾಡೆಲ್ ಅನ್ನು ಆಧರಿಸಿ ವಿಭಿನ್ನ ದರ ವಿಧಿಸುತ್ತಿರುವ ಆರೋಪದ ಮೇಲೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಪ್ರಮುಖ ಕ್ಯಾಬ್ ಅಗ್ರಿಗೇಟರ್‌ಗಳಾದ ಓಲಾ ಮತ್ತು ಉಬರ್‌ಗೆ ನೋಟಿಸ್ ನೀಡಿದೆ,
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸಲ್ಲಿ ಪೋಸ್ಟ್ ಮಾಡಿರುವ ಜೋಶಿ. “ಗ್ರಾಹಕರು ಬಳಸುವ ಮೊಬೈಲ್ ಫೋನ್‌ಗಳ (ಐಫೋನ್/ ಆಂಡ್ರಾಯ್ಡ್) ವಿವಿಧ ಮಾದರಿಗಳ ಆಧಾರದ ಮೇಲೆ ವಿಭಿನ್ನ ಪ್ರಯಾಣ ದರ ವಸೂಲಿ ಮಾಡುತ್ತಿರುವ ವಿಷಯದ ಕುರಿತು ಸಿಸಿಪಿಎ ಪ್ರಮುಖ ಕ್ಯಾಬ್ ಅಗ್ರಿಗೇಟರ್‌ಗಳಾದ ಓಲಾ ಮತ್ತು ಉಬರ್‌ಗೆ ನೋಟಿಸ್ ನೀಡಿದೆ” ಎಂದು ಹೇಳಿದ್ದಾರೆ.
ಒಂದು ನಿರ್ದಿಷ್ಟ ಪ್ರದೇಶಕ್ಕೆ ಹೋಗಲು ಕ್ಯಾಬ್ ಬುಕ್ ಮಾಡಿದಾಗ ಬೇರೆ ಬೇರೆ ಸ್ಮಾರ್ಟ್ಫೋನ್‌ಗಳಲ್ಲಿ ವಿಭಿನ್ನ ಶುಲ್ಕ ವಿಧಿಸುತ್ತಿರುವ ಬಗ್ಗೆ ಹಲವಾರು ಗ್ರಾಹಕರು ದೂರು ನೀಡಿದ ನಂತರ ಕ್ಯಾಬ್ ಅಗ್ರಿಗೇಟರ್‌ಗಳ ವಂಚನೆ ಬೆಳಕಿಗೆ ಬಂದಿದೆ.
ಕೆಲ ಮಾದರಿಯ ಫೋನ್ಗಳಲ್ಲಿ ಹೆಚ್ಚಿನ ಶುಲ್ಕ ತೋರಿಸಿದರೆ, ಇನ್ನು ಕೆಲ ಮಾದರಿಗಳಲ್ಲಿ ಕಡಿಮೆ ದರಗಳನ್ನು ತೋರಿಸಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಸದ್ಯ ಗ್ರಾಹಕರ ಕುಂದುಕೊರತೆ ಪರಿಹರಿಸಲು ಮತ್ತು ಕ್ಯಾಬ್ ಅಗ್ರಿಗೇಟರ್ಗಳು ನ್ಯಾಯಯುತ ಶುಲ್ಕ ವಿಧಿಸುವುದನ್ನು ಖಚಿತಪಡಿಸಿಕೊಳ್ಳಲು ಸಿಸಿಪಿಎ ಓಲಾ ಮತ್ತು ಉಬರ್‌ಗೆ ನೋಟಿಸ್ ನೀಡಿದೆ.
ಕಂಪನಿಗಳು ಈಗ ಬೆಲೆ ನಿಗದಿಯ ಕಾರ್ಯವಿಧಾನ ಮತ್ತು ಈ ಶುಲ್ಕ ವ್ಯತ್ಯಾಸಗಳ ಮೇಲೆ ಪ್ರಭಾವ ಬೀರುವ ಅಂಶಗಳ ಬಗ್ಗೆ ಸ್ಪಷ್ಟೀಕರಣಗಳನ್ನು ಒದಗಿಸಬೇಕಾಗಿದೆ.
ತಂತ್ರಜ್ಞಾನ ಕಂಪನಿಗಳನ್ನು ಒಳಗೊಂಡ ಗ್ರಾಹಕ ಸಂಬಂಧಿತ ವಿಷಯಗಳಲ್ಲಿ ಇಲಾಖೆ ಮಧ್ಯಪ್ರವೇಶಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ಸ್ವೀಕರಿಸಿದ ದೂರುಗಳಿಗೆ ಸಂಬಂಧಿಸಿದಂತೆ ಸಿಸಿಪಿಎ ಆಪಲ್‌ಗೆ ನೋಟಿಸ್ ನೀಡಿತ್ತು.
ಐಒಎಸ್ 18 ಅಥವಾ ನಂತರದ ಆವೃತ್ತಿಗಳಿಗೆ ಅಪ್ಡೇಟ್ ಮಾಡಿಕೊಂಡ ನಂತರ ಐಫೋನಿನ ಕಾರ್ಯಕ್ಷಮತೆ ಹಾಳಾಗಿದೆ ಎಂದು ಗ್ರಾಹಕರು ದೂರಿದ್ದರು. ಇಲಾಖೆಯು ಈ ಕುಂದುಕೊರತೆಗಳನ್ನು ಪರಿಶೀಲಿಸಿ, ಪ್ರತಿಕ್ರಿಯೆ ನೀಡುವಂತೆ ಆಪಲ್‌ಗೆ ನೋಟಿಸ್ ನೀಡಿತ್ತು.