ನಿಖಿಲ್ ಕುಮಾರ್ ಸ್ವಾಮಿಗೆ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದ್ದಾರೆ. ಈ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ನೀಡುವ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಟಿವಿ-೯ಗೆ ನೀಡಿದ ಸಂದರ್ಶನದಲ್ಲಿ ನಿಖಿಲ್ ಕುಮಾರಸ್ವಾಮಿ ಯಂಗ್ ಸ್ಟರ್ ಇದ್ದಾನೆ. ಕುಟುಂಬದ ಬೆಂಬಲ ಇದೆ. ಸಾಕಷ್ಟು ಅನುಭವವೂ ಆಗಿದೆ. ಆದ್ದರಿಂದ ರಾಜ್ಯಮಟ್ಟದಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ನೀಡುವುದಾಗಿ ಹೇಳಿದರು.
ಚುನಾವಣೆಯಲ್ಲಿ ಸೋತಿರಬಹುದು. ಸೋಲು-ಗೆಲುವು ಪಕ್ಷದ ಅಸ್ತಿತ್ವವನ್ನು ನಿರ್ಧರಿಸುವುದಿಲ್ಲ. ಚುನಾವಣೆಯಲ್ಲಿ ಸೋಲು ಗೆಲುವು ಇದ್ದಿದ್ದೆ. ಪಕ್ಷವನ್ನು ಅಳಿವು-ಉಳಿವನ್ನು ಭಗವಂತ ನಿರ್ಧರಿಸುತ್ತಾನೆ ಎಂದು ಅವರು ಹೇಳಿದರು.
ಮಂಡ್ಯದಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಜವಾಬ್ದಾರಿ ನೀಡಲಾಗುವುದು. ನನಗೀಗ ೯೨ ವರ್ಷ ವಯಸ್ಸಾಯಿತು. ಕುಮಾರಸ್ವಾಮಿ ಮೇಲೆ ಒತ್ತಡ ಕಡಿಮೆ ಮಾಡಲಾಗುವುದು ಎಂದು ದೇವೇಗೌಡ ವಿವರಿಸಿದರು.
ಹಾಸನದಲ್ಲಿ ಕಾಂಗ್ರೆಸ್ ಸಮಾವೇಶದ ಬಗ್ಗೆ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಮಾಡಿದ ಆರೋಪಗಳಿಂದ ನಾನೇನು ಕುಸಿದು ಹೋಗಿಲ್ಲ. ನಾವು ಪಕ್ಷವನ್ನು ಸಂಘಟಿಸುತ್ತೇವೆ ಎಂದು ಅವರು ಹೇಳಿದರು.