ಹೊಸದಿಲ್ಲಿ: ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ತಾವು ಗೆದ್ದರೆ, ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕೆನ್ನೆಯಂತ ನುಣುಪಾದ ರಸ್ತೆಗಳನ್ನು ತಮ್ಮ ವಿಧಾನಸಭೆ ಕ್ಷೇತ್ರದಲ್ಲಿ ನಿರ್ಮಿಸುವುದಾಗಿ ದಿಲ್ಲಿಯ ಕಲ್ಕಾಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧೂರಿ ಭಾನುವಾರ ನೀಡಿರುವ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ.
ರಮೇಶ್ ಬಿಧೂರಿ ಅವರ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ ಬೆನ್ನಲ್ಲೇ ದೆಹಲಿ ಸಿಎಂ ಅತಿಶಿ ತನ್ನ ತಂದೆಯನ್ನೇ ಬದಲಿಸಿದ್ದಾರೆ ಎಂದು ಮತ್ತೊಂದು ಹೇಳಿಕೆ ನೀಡುವ ಮೂಲಕ ಪ್ರತಿಪಕ್ಷಗಳ ಮಹಿಳಾ ನಾಯಕಿಯರ ವಿರುದ್ಧ ಅವಹೇಳನಕಾರಿ ಹೇಳಿಕೆ ಮುಂದುವರಿಸಿ ಭಂಡತನ ಮೆರೆದಿದ್ದಾರೆ.
ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಬಿಜೆಪಿ ನಾಯಕರು ತಮ್ಮ ನಾಚಿಕೆಗೇಡಿನ ಹೇಳಿಕೆಗಳನ್ನು ನೀಡುವ ಮೂಲಕ ನೈತಿಕತೆಯ ಮಿತಿ ಮೀರಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಧೂರಿ ಅವರ ಪ್ರಿಯಾಂಕ ಗಾಂಧಿ ವಾದ್ರಾ ವಿರುದ್ಧದ ಹೇಳಿಕೆ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್, ಇದು ‘ನಾಚಿಕೆಗೇಡು ಎಂದು ಕಿಡಿಕಾರಿದೆ. ಮಹಿಳೆಯ ವಿಚಾರದಲ್ಲಿ ಬಿಜೆಪಿ ಅಭ್ಯರ್ಥಿಯ ಕುರೂಪ ಮನಸ್ಥಿತಿಯನ್ನು ಪ್ರತಿಫಲಿಸುತ್ತದೆ. ಇದು ಬಿಜೆಪಿಯ ನೈಜ ಮುಖ ಎಂಬುದಾಗಿ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇಟ್ ವಾಗ್ದಾಳಿ ನಡೆಸಿದ್ದಾರೆ. ‘ಬಿಜೆಪಿ ಮಹಿಳಾ ವಿರೋಧಿ ಪಕ್ಷ’ ಎಂದು ಅವರು ಆರೋಪಿಸಿದ್ದಾರೆ.
ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇದ್ದು, ಆಮ್ ಆದ್ಮಿ ಪಕ್ಷ ಕೂಡ ಬಿಧೂರಿ ಅವರ ಹೇಳಿಕೆಯನ್ನು ಟೀಕಿಸಿದೆ. “ಇದು ಬಿಜೆಪಿ ಅಭ್ಯರ್ಥಿ. ಅವರ ಭಾಷೆಯನ್ನು ಆಲಿಸಿ. ಮಹಿಳೆಯರಿಗೆ ಬಿಜೆಪಿ ಗೌರವ ನೀಡುವ ಪರಿ ಇದು. ಇಂತಹ ನಾಯಕರ ಕೈಗಳಲ್ಲಿ ದಿಲ್ಲಿ ಮಹಿಳೆಯರ ಗೌರವ ಸುರಕ್ಷಿತವಾಗಿ ಇರಬಲ್ಲದೇ?” ಎಂದು ಎಎಪಿಯ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ತಮ್ಮ ಹೇಳಿಕೆಯಲ್ಲಿ ಅಪಾರ್ಥಕ್ಕೆ ಕಲ್ಪಿಸುವ ಅಂಶಗಳಿಲ್ಲ ಎಂದು ರಮೇಶ್ ಬಿಧೂರಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ. ಹೇಮಾಮಾಲಿನಿ ಅವರ ಕೆನ್ನೆಯಷ್ಟು ಮೃದುವಾದ ರಸ್ತೆಗಳನ್ನು ಬಿಹಾರದಲ್ಲಿ ನಿರ್ಮಿಸುವುದಾಗಿ ಈ ಹಿಂದೆ ಲಾಲು ಪ್ರಸಾದ್ ಯಾದವ್ ಹೇಳಿದ್ದನ್ನು ಉಲ್ಲೇಖಿಸುವ ಮೂಲಕ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.