ಪತ್ನಿ ದಾಖಲಿಸಿದ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಬೆಂಗಳೂರಿನಲ್ಲಿ ಟೆಕ್ಕಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ವರದಕ್ಷಿಣೆ ನಿಯಂತ್ರಣ ಕಾಯ್ದೆಯನ್ನು ದುರುಪಯೋಗ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ವರದಕ್ಷಿಣಿ ಕಿರುಕುಳದಿಂದ ಮಹಿಳೆಯರನ್ನು ರಕ್ಷಿಸಲು ಇರುವ ಕಾನೂನುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣಗ ವಿಚಾರಣೆ ನಡೆಸುವಾಗ ನ್ಯಾಯಾಧೀಶರು ಎಚ್ಚರಿಕೆ ವಹಿಸಬೇಕು ಎಂದು ಸುಪ್ರೀಂಕೋರ್ಟ್ ಕೆಳಹಂತದ ಕೋರ್ಟ್ ಗಳಿಗೆ ಸೂಚಿಸಿದೆ.
ಬೆಂಗಳೂರಿನಲ್ಲಿ ೩೪ ವರ್ಷದ ಅತುಲ್ ಸುಭಾಷ್ ೪೦ ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಪತ್ನಿ ನಿಕಿತಾ ಸಿಂಘಾನಿಯಾ ಹಾಗೂ ಅವರ ಕುಟುಂಬ ತನ್ನ ವಿರುದ್ಧ ವರದಕ್ಷಿಣೆ ಕಿರುಕುಳ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದರಿಂದ ಪದೇಪದೆ ಉತ್ತರಪ್ರದೇಶ ಹಾಗೂ ಬೆಂಗಳೂರು ನಡುವೆ ಓಡಾಡಬೇಕಾಗಿತ್ತು.
ಪತ್ನಿ ಕೇಸು ದಾಖಲಿಸಿ ಕಿರುಕುಳ ನೀಡಿದ್ದರಿಂದ ಬೇಸತ್ತ ಅತುಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಬೆನ್ನಲ್ಲೇ ತೆಲಂಗಾಣ ಹೈಕೋರ್ಟ್ ವರದಕ್ಷಿಣೆ ಕಿರುಕುಳದ ಆರೋಪದಡಿ ವ್ಯಕ್ತಿಯೊಬ್ಬನಿಗೆ ಶಿಕ್ಷೆಯನ್ನು ಪುನರ್ ಪರಿಶೀಲಿಸುವಂತೆ ಸೂಚಿಸಿದ್ದು, ಇದರಲ್ಲಿ ಮಹಿಳೆ ಕಾನೂನು ದುರ್ಬಳಕೆ ಮಾಡಿಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿದೆ.
ನ್ಯಾಯಮೂರ್ತಿ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಎನ್.ಕೋಟೇಶ್ವರ್ ಸಿಂಗ್ ನೇತೃತ್ವದ ವಿಭಾಗೀಯ ಪೀಠ ಬುಧವಾರ ಈ ಆದೇಶ ಹೊರಡಿಸಿದ್ದು, ನ್ಯಾಯಾಲಯಗಳು ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಪತಿ ವಿರುದ್ಧ ಶಿಕ್ಷೆ ಪ್ರಕಟಿಸುವ ಮುನ್ನ ಕಾನೂನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ.
ದಾಂಪತ್ಯದಲ್ಲಿ ಸಣ್ಣಪುಟ್ಟ ತಪ್ಪಿಗೆ ಪತಿಯನ್ನು ನಿಯಂತ್ರಿಸಲು ವರದಕ್ಷಿಣೆ ಕಿರುಕುಳ ಕಾನೂನನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಸ್ಪಷ್ಟ ಆರೋಪ ಅಥವಾ ಸಾಕ್ಷ್ಯಗಳಿಲ್ಲದೇ ವರದಕ್ಷಿಣೆ ಕಿರುಕುಳ ಆರೋಪದಲ್ಲಿ ತೀರ್ಪು ನೀಡಬಾರದು. ಪತಿಯ ಮೇಲೆ ಸೇಡಿಗೆ ಕಾನೂನು ದುರ್ಬಳಕೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ನ್ಯಾಯಾಲಯ ವಿವರಿಸಿದೆ.