ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ ಕರ್ ವಿರುದ್ಧ ಅವಿಶ್ವಾಸ ಮಂಡನೆಗೆ ಕಲಾಪಕ್ಕೆ ಅಡ್ಡಿಯಾಗಲು ರಾಜ್ಯಸಭಾ ಅಧ್ಯಕ್ಷರೇ ಕಾರಣ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ಪ್ರತಿಪಕ್ಷಗಳು ಜಗದೀಪ್ ಧನ್ ಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿತ್ತು. ಆದರೆ ಮಂಡನೆಗೆ ಅವಕಾಶ ನೀಡದೇ ವಿಷಯ ಚರ್ಚೆಗೆ ಮುಂದಾಗಿದ್ದರಿಂದ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದಾಗ ಗದ್ಧಲ ಉಂಟಾಗಿ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.
ಕಲಾಪ ಮುಂದೂಡಿಕೆ ಆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಅಧ್ಯಕ್ಷರ ವರ್ತನೆ ದೇಶದ ಸಮಗ್ರತೆ ಧಕ್ಕೆ ತಂದಿದ್ದು, ಇದು ತುಂಬಾ ನೋವುಂಟು ಮಾಡಿದೆ ಎಂದು ಆರೋಪಿಸಿದರು.
ಜಗದೀಪ್ ಧನ್ ಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿರುವುದರ ಹಿಂದೆ ವೈಯಕ್ತಿಕ ಹಿತಾಸಕ್ತಿ ಯಾವುದೂ ಇಲ್ಲ. ನಾವು ಅವಿಶ್ವಾಸ ನಿರ್ಣಯ ಮಂಡಿಸುವ ಕುರಿತು ದೊಡ್ಡ ಹೆಜ್ಜೆ ಇಟ್ಟಿದ್ದೇವೆ. ಈ ಸಂಬಂಧ ನೋಟಿಸ್ ಕೂಡ ಜಾರಿ ಮಾಡಿದ್ದೇವೆ ಎಂದು ಅವರು ಹೇಳಿದರು.
ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶ ನೀಡಬೇಕಾಗಿರುವುದು ರಾಜ್ಯಸಭಾ ಅಧ್ಯಕ್ಷರ ಪ್ರಮುಖ ಕರ್ತವ್ಯ. ಇದೊಂದು ಸೂಕ್ಷ್ಮ ವಿಷಯವಾಗಿದ್ದು, ಅವರ ಪ್ರತಿಕ್ರಿಯೆ ಬೇಸರ ಮೂಡಿಸಿದೆ. ಕಳೆದ ಮೂರು ವರ್ಷಗಳಲ್ಲಿ ಅವರು ಪ್ರತಿಪಕ್ಷಗಳಿಗೆ ಯಾವುದೇ ಸಮಯಕಾಶ ನೀಡಿಲ್ಲ. ಇದು ಅವರ ಧೋರಣೆ ತೋರಿಸುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.