ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ನಡುವಿನ ಜಗತ್ತಿನ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಮೇಲೆ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಮಾಡಲಾಗಿದ್ದು, ಉದ್ಘಾಟನೆಗೆ ಸಜ್ಜಾಗಿದೆ.
ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ ಬಹುನಿರೀಕ್ಷಿತ ಚೆನಾಬ್ ಸೇತುವೆಯೂ ಸೇರಿದಂತೆ ಕತ್ರಾ-ಬನಿಹಾಲ್ ವಿಭಾಗದಲ್ಲಿ ಭಾರತೀಯ ರೈಲ್ವೇ, ಪ್ರಾಯೋಗಿಕ ರೈಲು ಸಂಚಾರವನ್ನು ಯಶಸ್ವಿಯಾಗಿ ನಡೆಸಿತು.
ಜ.7 ಮತ್ತು ೮ರಂದು ರೈಲ್ವೇ ಸುರಕ್ಷತಾ ಆಯುಕ್ತರು ಸುರಕ್ಷತಾ ತಪಾಸಣೆ ನಡೆಸಲಿದ್ದಾರೆ. ಕತ್ರಾ-ರಿಯಾಸಿ ವಿಭಾಗದ ಈ ತಪಾಸಣೆಯಲ್ಲಿ, ಬನಿಹಾಲ್‌ನಿಂದ ಕತ್ರಾಗೆ ರೈಲು ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲಿದೆ ಎಂದು ಭಾರತೀಯ ರೈಲ್ವೇಯ ಮುಖ್ಯ ಆಡಳಿತಾಧಿಕಾರಿ ಸಂದೀಪ್ ಗುಪ್ತಾ ಹೇಳಿದರು.
ಬನಿಹಾಲಿಂದ ಕತ್ರಾ ಮತ್ತು ವಿರುದ್ಧ ದಿಕ್ಕಿನಲ್ಲಿ ಎಲೆಕ್ಟ್ರಿಕ್ ಲೋಕೋ ಮೂಲಕ ಪ್ರಾಯೋಗಿಕ ಸಂಚಾರ ನಡೆಸಲಾಯಿತು. ಹಳಿಗಳ ಸ್ಥಿರತೆ, ಸಿಗ್ನಲಿಂಗ್ ವ್ಯವಸ್ಥೆಗಳು, ಸುರಕ್ಷತಾ ಮೂಲಸೌಕರ್ಯ ಹಾಗೂ ಒಟ್ಟಾರೆ ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಲು ಪ್ರಾಯೋಗಿಕ ಸಂಚಾರವನ್ನು ನಡೆಸಲಾಯಿತು.
ಪ್ರಾಯೋಗಿಕ ಸಂಚಾರದ ರೈಲು ಅತ್ಯಂತ ಸವಾಲಿನಿಂದ ಕೂಡಿರುವ ಕತ್ರಾ-ಬನಿಹಾಲ್ ಪ್ರದೇಶ, ಸುರಂಗಗಳು ಮತ್ತು ಕಣಿವೆಯನ್ನು ದಾಟಿಹೋಗಲು ಇರುವ ಎತ್ತರದ ಸೇತುವೆಗಳಲ್ಲಿ ದಕ್ಷತೆಯಿಂದ ಕ್ರಮಿಸಿದೆ.
ಕತ್ರಾ-ಬನಿಹಾಲ್ ರೈಲ್ವೇ ವಿಭಾಗ ಯುಎಸ್ಬಿಆರ್‌ಎಲ್ ಯೋಜನೆಯಲ್ಲಿ ಪ್ರಮುಖ ಕೊಂಡಿ. ಜಮ್ಮು-ಕಾಶ್ಮೀರ ಕಣಿವೆಯ ನಡುವಿನ ಪ್ರಯಾಣದ ಅಂತರವನ್ನು ಇದು ಕಡಿಮೆ ಮಾಡುತ್ತದೆ.
ಯೋಜನೆಯ ವೈಶಿಷ್ಟ್ಯ: ಈ ಯೋಜನೆಯು ಸಂಕೀರ್ಣ ಸ್ಥಳಾಕೃತಿ ಮತ್ತು ಇಂಜಿನಿಯರಿಂಗ್ ಕೌಶಲ್ಯದ ಅದ್ಭುತಗಳಿಗೆ ಹೆಸರುವಾಸಿಯಾಗಿದೆ.
ವಿಶ್ವದ ಅತೀ ಎತ್ತರದ ರೈಲ್ವೆ ಸೇತುವೆಯಾದ (1,315 ಮೀಟರ್) ಚೆನಾಬ್ ಸೇತುವೆಯನ್ನು ಇದು ಒಳಗೊಂಡಿದೆ.
ಅಷ್ಟೇ ಅಲ್ಲ, ಹಲವು ಅತ್ಯಾಧುನಿಕ ಸುರಂಗಗಳು ಮತ್ತು ಅಷ್ಟೇ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಇಲ್ಲಿ ಅಳವಡಿಸಿರುವುದು ವಿಶೇಷ.
ಪ್ರಾಯೋಗಿಕ ಸಂಚಾರದ ಮೂಲಕ ಭಾರತೀಯ ರೈಲ್ವೇ, ಕಾಶ್ಮೀರ ಕಣಿವೆಗೆ ತಡೆರಹಿತ ರೈಲು ಸಂಪರ್ಕ ಒದಗಿಸುವತ್ತ ಐತಿಹಾಸಿಕ ಹೆಜ್ಜೆ ಇಟ್ಟಿತು.
ಇದರ ಫಲವಾಗಿ ಪ್ರಯಾಣಿಕರು, ಸರಕುಗಳಿಗೆ ಸುಲಭ ಹಾಗೂ ಸರಾಗ ಸಂಚಾರ ವ್ಯವಸ್ಥೆ ಖಾತ್ರಿಯಾಗಿದೆ. ರೈಲು ಸಂಪರ್ಕದೊಂದಿಗೆ ಈ ಪ್ರದೇಶ ಬೆಳವಣಿಗೆ ಹೊಂದುವುದರೊಂದಿಗೆ ದೇಶದ ಮುಖ್ಯವಾಹಿನಿಯೊಂದಿಗೆ ಸೇರಲೂ ಕೂಡಾ ದಾರಿ ಮಾಡಿಕೊಡುತ್ತದೆ.
ರೈಲ್ವೇ ಸುರಕ್ಷತಾ ಆಯುಕ್ತರ ಅಂತಿಮ ಪ್ರಾಯೋಗಿಕ ಪರೀಕ್ಷೆಯ ನಂತರ ನಿರಂತರವಾಗಿ ಇಲ್ಲಿ ರೈಲು ಸಂಚಾರ ಶುರುವಾಗಲಿದೆ.