ನೈಜಿರಿಯಾದಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಭೀಕರ ಪ್ರವಾಹದಿಂದ 111 ಮಂದಿ ಅಸುನೀಗಿದ್ದು, 50ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿದೆ.
ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ಸೆಂಟ್ರಲ್ ನೈಜಿರಿ ಹಾಗೂ ಮಾರುಕಟ್ಟೆ ಪ್ರದೇಶವಾದ ಮೊಕ್ವಾ ಪ್ರವಾಹ ಉಂಟಾಗಿದ್ದು, 111 ಮೃತದೇಹಗಳನ್ನು ಹೊರಗೆ ತೆಗೆಯಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ.
ನೈಜಿರಿಯಾ ಸರ್ಕಾರದ ವಕ್ತಾರ ಇಬ್ರಾಹಿಂ ಅಬು ವಿಭಿನ್ನ ಜಾಗಗಳಲ್ಲಿ ರಕ್ಷಣಾ ಕಾರ್ಯಗಳು ನಡೆದಿದ್ದು, ಪರಿಹಾರ ಕಾರ್ಯದ ವಿವರಗಳನ್ನು ಪಡೆಯಲಾಗುತ್ತಿದೆ. ಸದ್ಯಕ್ಕೆ ಸಾವಿನ ಸಂಖ್ಯೆ 111ಕ್ಕೆ ಏರಿಕೆಯಾಗಿದ್ದು, ಇನ್ನಷ್ಟು ಹೆಚ್ಚುವ ಭೀತಿ ಇದೆ ಎಂದಿದ್ದಾರೆ.
ಮೊಕ್ವಾ ಸುತ್ತಮುತ್ತಲ ಪ್ರದೇಶಗಳಿಗೆ ಪ್ರಮುಖ ಮಾರುಕಟ್ಟೆ ಆಗಿದ್ದು, ವ್ಯಾಪಾರಸ್ಥರು ಮತ್ತು ರೈತರಿಗೆ ಪ್ರಮುಖ ತಾಣವಾಗಿದೆ. ರಾಜಧಾನಿ ಅಬುಜಾದಿಂದ 140 ಕಿ.ಮೀ. ದೂರದಲ್ಲಿರುವ ಈ ಪ್ರದೇಶ ಅತ್ಯಂತ ಮಹತ್ವದ್ದಾಗಿದೆ.
ನೈಜಿರಿಯಾದ 36 ನಗರಗಳಲ್ಲಿ ಪ್ರವಾಹ ಪರಸ್ಥಿತಿ ಉಂಟಾಗಿದ್ದು, ಭಾರೀ ಮಳೆಯಿಂದಾಗಿ ಕೆಲವು ಸಣ್ಣ ಡ್ಯಾಂಗಳು ಕೊಚ್ಚಿ ಹೋಗಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಭೀಕರವಾಗಲು ಕಾರಣ ಎಂದು ಹೇಳಲಾಗಿದೆ.



