ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಏಕದಿನ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ ಶುಕ್ರವಾರ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಜನವರಿ 11ರಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಲಿದೆ. ಕೋಚ್ ಗೌತಮ್ ಗಂಭೀರ್ ಗರಡಿಯಲ್ಲಿ ತಂಡ ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಆಯ್ಕೆಯಲ್ಲಿ ಭಾರೀ ಎಚ್ಚರಿಕೆ ವಹಿಸಲಿದೆ ಎಂದು ಹೇಳಲಾಗಿದೆ.
ಮೂರು ಪಂದ್ಯಗಳ ಏಕದಿನ ಸರಣಿಗೆ ತಂಡದಿಂದ ಕಡೆಗಣಿಸಲ್ಪಟ್ಟಿದ್ದ ಮಧ್ಯಮ ವೇಗಿ ಮೊಹಮದ್ ಶಮಿ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ. ಅಲ್ಲದೇ ತಂಡದಿಂದ ನಿರ್ಲಕ್ಷಿಸಲಾಗಿರುವ ರಿಷಭ್ ಪಂತ್ ಅವರನ್ನು ಮತ್ತೆ ಕಡೆಗಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ರಿಷಭ್ ಪಂತ್ ಚಾಂಪಿಯನ್ಸ್ ಟ್ರೋಫಿ ನಂತರ ಅಂದರೆ 2025ರಿಂದ ಏಕದಿನ ಸರಣಿಯಲ್ಲಿ ಸ್ಥಾನ ಪಡೆದಿಲ್ಲ. ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಅವರನ್ನು ಪರಿಗಣಿಸುವುದು ಅನುಮಾನವಾಗಿದೆ.
ಇದೇ ವೇಳೆ ಭಾರತ ತಂಡ ಜಸ್ ಪ್ರೀತ್ ಬುಮ್ರಾ ಹೊರತುಪಡಿಸಿ ಉಳಿದ ಯಾವುದೇ ಬೌಲರ್ ಮೇಲೆ ನಂಬಿಕೆ ಇಡುವ ಪರಿಸ್ಥಿತಿಯಲ್ಲಿ ಇಲ್ಲ. ಅರ್ಷದೀಪ್ ಸಿಂಗ್ ಮತ್ತು ರಾಣಾ ಗಂಭೀರ್ ಒತ್ತಾಯದ ಮೇರೆಗೆ ಸಾಕಷ್ಟು ಅವಕಾಶ ನೀಡಿದ್ದರೂ ಪರಿಣಾಮಕಾರಿ ದಾಳಿ ನಡೆಸಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೊಹಮದ್ ಶಮಿಗೆ ಸ್ಥಾನ ನೀಡಲು ಆಯ್ಕೆದಾರರು ಮನಸ್ಸು ಮಾಡಿದ್ದಾರೆ.
ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ವಿಜಯ್ ಹಜಾರೆಯಲ್ಲಿ ಉತ್ತಮ ಪ್ರದರ್ಶನ ನೀಡಿರುವುದರಿಂದ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ.



