ನಾಯಕ ರಜತ್ ಪಟಿದಾರ್ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ 230 ರನ್ ಗುರಿ ಒಡ್ಡಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆರ್ ಸಿಬಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 254 ರನ್ ಕಲೆ ಹಾಕಿತು.
ಹೊಡಿಬಡಿ ಆಟಕ್ಕೆ ಮುಂದಾದ ವೆಂಕಟೇಶ್ ಅಯ್ಯರ್ (19) ಬೇಗನೇ ನಿರ್ಗಮಿಸಿದರು. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಎರಡನೇ ವಿಕೆಟ್ ಗೆ 72 ರನ್ ಜೊತೆಯಾಟದಿಂದ ಉತ್ತಮ ವೇದಿಕೆ ನಿರ್ಮಿಸಿದರು.
ಕೊಹ್ಲಿ 25 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 43 ರನ್ ಸಿಡಿಸಿದರೆ, ಪಡಿಕ್ಕಲ್ 19 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡ 30 ರನ್ ಬಾರಿಸಿದರು. ಆದರೆ ಇಬ್ಬರೂ ಜೇಸನ್ ಹೋಲ್ಡರ್ ಒಂದೇ ಓವರ್ ನಲ್ಲಿ ಔಟಾಗಿ ನಿರಾಸೆ ಮೂಡಿಸಿದರು.
ಈ ಹಂತದಲ್ಲಿ ಜೊತೆಯಾದ ನಾಯಕ ರಹತ್ ಪಟಿದಾರ್ ಮತ್ತು ಕೃನಾಲ್ ಪಾಂಡ್ಯ 4ನೇ ವಿಕೆಟ್ ಗೆ 93 ರನ್ ಜೊತೆಯಾಟದಿಂದ ತಂಡವನ್ನು ಉತ್ತಮ ಸ್ಥಿತಿಗೆ ತಂದು ನಿಲ್ಲಿಸಿದರು.
21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಜತ್ ಪಟಿದಾರ್ 33 ಎಸೆತಗಳಲ್ಲಿ 5 ಬೌಂಡರಿ ಮತ್ತು 9 ಸಿಕ್ಸರ್ ಸಹಾಯದಿಂದ 93 ರನ್ ಸಿಡಿಸಿದರು. ಕೃನಾಲ್ ಪಾಂಡ್ಯ 28 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿ 43 ರನ್ ಗಳಿಸಿದರು.



