ನನ್ನ ಮೇಲಾಗಲಿ, ಯತ್ನಾಳ್ ಮೇಲಾಗಲಿ ಕ್ರಮ ಕೈಗೊಳ್ಳಲು ನಾಯಕರಿಗೆ ಧಮ್ ಬೇಕು ಎಂದು ಮಾಜಿ ಸಚಿವ ಜಿಟಿ ದೇವೇಗೌಡ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ನಾನು ಜೆಡಿಎಸ್ ನಲ್ಲಿ ಇದ್ದೇನೆ. ೬ ತಿಂಗಳು ಪಕ್ಷದಲ್ಲೇ ಇರುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.
ನಾನು ಜೆಡಿಎಸ್ ಯಾವ ಸಭೆಗೂ ಹೋಗುವುದಿಲ್ಲ. ಇತ್ತೀಚೆಗೆ ನಡೆದ ಸಭೆಗಳಿಗೆ, ಚುನಾವಣೆಗಳಿಗೆ ನನಗೆ ಆಹ್ವಾನ ನೀಡಿರಲಿಲ್ಲ. ನಾನು ಕರೆಯದೇ ಹೋಗುವವನೂ ಅಲ್ಲ ಎಂದು ಅವರು ಹೇಳಿದರು.
ನನ್ನನ್ನು ವಜಾ ಮಾಡೋಕೆ ಅಥವಾ ಸಸ್ಪೆಂಡ್ ಮಾಡೋಕೆ ಧಮ್ ಬೇಕು. ಜನ ಕಟ್ಟೋರಿಗೆ ವಜಾ ಮಾಡೋಕೆ ಆಗಲ್ಲ. ನನ್ನ ವಿರುದ್ಧ ಕ್ರಮ ಕೈಗೊಳ್ಳಲು ನಾಯಕರಿಗೆ ಧಮ್, ತಾಕತ್ ಇರಬೇಕು. ಅವರಿಗೆ ಜನ ಸಂಘಟಿಸುವ ಶಕ್ತಿ ಇರಬೇಕು ಎಂದು ಜಿಟಿ ದೇವೇಗೌಡ ಸವಾಲು ಹಾಕಿದರು.
ನಿಖಿಲ್ ಕುಮಾರಸ್ವಾಮಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಸುದ್ದಿ ಹರಡುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ನಿಖಿಲ್ ಕುಮಾರಸ್ವಾಮಿಗೆ ಒಳ್ಳೆಯದಾಗಲಿ ಎಂದಷ್ಟೇ ಪ್ರತಿಕ್ರಿಯಿಸಿದರು.
ಇದೇ ವೇಳೆ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ತನಿಖೆ ನಡೆದ ಮಾತ್ರಕ್ಕೆ ರಾಜೀನಾಮೆ ನೀಡಬೇಕಾ? ಎಷ್ಟು ಜನ ರಾಜಕೀಯ ವ್ಯಕ್ತಿಗಳ ಮೇಲೆ ಕೇಸ್ ಇದೆ ಗೊತ್ತಾ? ಅವರೆಲ್ಲಾ ರಾಜೀನಾಮೆ ಕೊಡ್ತಾರಂತಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ವಿರುದ್ಧ ಈಗ ಇರುವುದು ಆರೋಪ ಮಾತ್ರ. ಕೋರ್ಟ್ ನಲ್ಲಿ ವಿಚಾರಣೆ ಆಗಿ ತೀರ್ಪು ಬರಲಿ. ಆಗ ನೋಡೋಣ. ಈಗ ಸುಮ್ಮನೆ ರಾಜೀನಾಮೆ ಕೇಳುವುದು ಸರಿಯೇ? ಹಿಂದೆ ಸಿಎಂ, ಸಚಿವರಾಗಿದ್ದವರು ಯಾರಾದರೂ ರಾಜೀನಾಮೆ ಕೊಟ್ಟಿದ್ದಾರಾ ಎಂದು ಜಿಟಿ ದೇವೇಗೌಡ ಪ್ರಶ್ನಿಸಿದರು.