ಬೆಂಗಳೂರು: ನನ್ನ ವಿರುದ್ಧ ಹನಿಟ್ರ್ಯಾಪ್ ಮಾಡುವ ಪ್ರಯತ್ನ ಮಾಡಲಾಗಿದ್ದು, ರಾಜ್ಯದ ಸುಮಾರು 48 ಮುಖಂಡರ ಪೆನ್ ಡ್ರೈವ್, ಸಿಡಿ ಇವೆ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ವಿಧಾನಸಭೆ ಅಧಿವೇಶನದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸಚಿಚ ಸತೀಶ್ ಜಾರಕಿಹೊಳಿ ಗುರುವಾರ ಬೆಳಿಗ್ಗೆ ಮಾಧ್ಯಮದ ಜೊತೆ ಮಾತನಾಡಿ, ಇಬ್ಬರು ಸಚಿವರನ್ನು ಹನಿಟ್ರ್ಯಾಪ್ ಮಾಡುವ ಪ್ರಯತ್ನ ಆಗಿದೆ ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಮಧ್ಯಾಹ್ನ ವಿಷಯ ಪ್ರಸ್ತಾಪಿಸಿದರು.
ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹನಿಟ್ರ್ಯಾಪ್ ಮೂಲಕ ಮುಖಂಡರನ್ನು ಬೀಳಿಸಿಕೊಳ್ಳಲಾಗುತ್ತಿದೆ. ನನ್ನ ಮೇಲೂ ಹನಿಟ್ರ್ಯಾಪ್ ಪ್ರಯತ್ನ ಆಗಿತ್ತು ಎಂದು ಆರೋಪಿಸಿದರು.
ಸಚಿವ ಕೆಎನ್ ರಾಜಣ್ಣ ಹಾಗೂ ಅವರ ಪುತ್ರನ ವಿರುದ್ಧ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂಬ ಸುದ್ದಿಗಳು ಹರಡುತ್ತಿವೆ. ಈ ಬಗ್ಗೆ ತನಿಖೆ ನಡೆಯಬೇಕು. ರಾಜ್ಯದಲ್ಲಿ ಇಂತಹ ಹೀನ ಕೆಲಸಗಳನ್ನ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.
ಸಚಿವರು, ಆಡಳಿತ ಪಕ್ಷದ ಶಾಸಕರು ಅಲ್ಲದೇ ಪ್ರತಿಪಕ್ಷಗಳ ಹಲವು ಶಾಸಕರ ಮೇಲೆ ಹನಿಟ್ರ್ಯಾಪ್ ಮಾಡಲಾಗುತ್ತಿದೆ. ಇದರಲ್ಲಿ ಯಾರಿದ್ದಾರೆ ಎಂಬ ಸತ್ಯ ಹೊರಗೆ ಬರಬೇಕಿದೆ ಎಂದು ಪಾಟೀಲ್ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆಎನ್. ರಾಜಣ್ಣ, ನನ್ನ ಮೇಲೆ ಹನಿಟ್ರ್ಯಾಪ್ ಪ್ರಯತ್ನ ಆಗಿರುವುದು ನಿಜ. ನನ್ನ ಮೇಲೆ ಮಾತ್ರವಲ್ಲ ಹಲವು ಮುಖಂಡರ ಮೇಲೂ ಆಗಿದೆ. ನನಗೆ ದೊರೆತ ಮಾಹಿತಿ ಪ್ರಕಾರ 48 ಮುಖಂಡರ ಪೆನ್ ಡ್ರೈವ್ ಮತ್ತು ಸಿಡಿ ಸಂಗ್ರಹಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ರಾಜ್ಯದ ಶಾಸಕರು ಮಾತ್ರವಲ್ಲ, ಕೇಂದ್ರದ ಹಲವು ನಾಯಕರ ವಿರುದ್ಧವೂ ಹನಿಟ್ರ್ಯಾಪ್ ಮಾಡಿ ಸಿಡಿ, ಪೆನ್ ಡ್ರೈವ್ ಸಂಗ್ರಹಿಸಲಾಗಿದೆ ಎಂದು ಅವರು ಆರೋಪಿಸಿದರು.
ರಾಜಣ್ಣ ದೂರು ನೀಡಿದರೆ ಉನ್ನತ ಮಟ್ಟದ ತನಿಖೆಗೆ ಆದೇಶಿಸುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್ ಸದನಕ್ಕೆ ಭರವಸೆ ನೀಡಿದರು. ಯತ್ನಾಳ್ ಸೇರಿ ಕೆಲವು ಸದಸ್ಯರು ಬಹಳ ಗಂಭೀರವಾದ ವಿಷಯ ಎತ್ತಿದ್ದಾರೆ. ಇದು ಈ ಸದನದ ಪ್ರತಿಯೊಬ್ಬ ಸದಸ್ಯನ ಪ್ರಶ್ನೆ, ಇದಕ್ಕೆ ಒಂದು ಫುಲ್ ಸ್ಟಾಪ್ ಹಾಕಬೇಕು ಎಂದರು.
ಜನಪ್ರತಿನಿಧಿಗಳ ಮೇಲೆ ಈ ರೀತಿ ಹನಿಟ್ರ್ಯಾಪ್ ಮಾಡಿಸುವುದು ಕೆಟ್ಟ ಸಂಪ್ರದಾಯ. ಈ ಕೀಳು ಪ್ರಯತ್ನಗಳ ಕುರಿತು ಮುಖ್ಯಮಂತ್ರಿಗಳು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪರಮೇಶ್ವರ್, ಹನಿಟ್ರ್ಯಾಪ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶಿಸಲಾಗುವುದು ಎಂದು ಹೇಳಿದರು.