Sunday, May 31, 2026
Google search engine
Homeರಾಜ್ಯಜೂನ್‌ 3ರಂದು ಬೆಂಗಳೂರು-ಮಂಗಳೂರು ನಡುವೆ ಪ್ರಾಯೋಗಿಕ ವಂದೇ ಭಾರತ್‌ ರೈಲು ಸಂಚಾರ!

ಜೂನ್‌ 3ರಂದು ಬೆಂಗಳೂರು-ಮಂಗಳೂರು ನಡುವೆ ಪ್ರಾಯೋಗಿಕ ವಂದೇ ಭಾರತ್‌ ರೈಲು ಸಂಚಾರ!

ಕರಾವಳಿ ಮತ್ತು ರಾಜ್ಯ ರಾಜಧಾನಿ ಬೆಂಗಳೂರು ನಡುವೆ ಸಂಚಾರ ಅವಧಿ ಕಡಿಮೆಗೊಳಿಸುವ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ರೈಲು ಪ್ರಾಯೋಗಿಕ ಸಂಚಾರ ಜೂನ್‌ 3ರಂದು ನಡೆಯಲಿದೆ.

ರೈಲ್ವೆ ಇಲಾಖೆ ಜೂನ್‌ 3ರಂದು ಬೆಳಿಗ್ಗೆ ಬೆಂಗಳೂರು ಮತ್ತು ಮಂಗಳೂರು ನಡುವೆ ಪ್ರಾಯೋಗಿಕ ರೈಲು ಸಂಚಾರ ನಡೆಸಲಿದೆ. ಈ ಮೂಲಕ ಎರಡು ನಗರಗಳ ನಡುವಿನ ಸಂಚಾರ ಅವಧಿ 4 ಗಂಟೆಯಷ್ಟು ಕಡಿತವಾಗಲಿದೆ.

ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, 8 ಬೋಗಿಗಳ ವಂದೇ ಭಾರತ್ ರೈಲು ಜೂನ್ 3ರಂದು ಬೆಳಗ್ಗೆ 6.05ಕ್ಕೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಹೊರಡಲಿದ್ದು, ಮಧ್ಯಾಹ್ನ 2.40ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ತಲುಪಲಿದೆ. ಸುಮಾರು 8 ಗಂಟೆ 40 ನಿಮಿಷಗಳ ಈ ಪಯಣವು ಮಾರ್ಗದ ಸಾಮರ್ಥ್ಯ, ವೇಗ, ಸುರಕ್ಷತೆ ಹಾಗೂ ತಾಂತ್ರಿಕ ವ್ಯವಸ್ಥೆಗಳ ಪರೀಕ್ಷೆಗೆ ಮಹತ್ವದ್ದಾಗಿದೆ.

ಪ್ರಾಯೋಗಿಕ ಸಂಚಾರದ ವೇಳೆ ರೈಲು ಬೆಳಗ್ಗೆ 9 ಗಂಟೆಗೆ ಹಾಸನ ತಲುಪಲಿದ್ದು, 9.10ಕ್ಕೆ ಅಲ್ಲಿಂದ ಹೊರಡಲಿದೆ. 9.55ಕ್ಕೆ ಸಕಲೇಶಪುರ ತಲುಪಿ, 10 ಗಂಟೆಗೆ ಮತ್ತೆ ಪ್ರಯಾಣ ಮುಂದುವರಿಸಲಿದೆ. ಬಳಿಕ ಮಧ್ಯಾಹ್ನ 12.30ಕ್ಕೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ತಲುಪಲಿದ್ದು, ಐದು ನಿಮಿಷಗಳ ಬಳಿಕ 12.35ಕ್ಕೆ ಅಲ್ಲಿಂದ ಹೊರಡಲಿದೆ. ಅಪರಾಹ್ನ 2.05ಕ್ಕೆ ಪಡೀಲ್ ತಲುಪಿದ ನಂತರ 2.40ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ಸೇರುವ ನಿರೀಕ್ಷೆಯಿದೆ.

ಹಿಂತಿರುಗುವ ಪ್ರಯಾಣದಲ್ಲಿ ರೈಲು ಅಪರಾಹ್ನ 2.45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು 3.10ಕ್ಕೆ ಪಡೀಲ್, 3.50ಕ್ಕೆ ಸುಬ್ರಹ್ಮಣ್ಯ ರೋಡ್ ತಲುಪಲಿದೆ. ಅಲ್ಲಿಂದ 3.52ಕ್ಕೆ ಹೊರಟು ಸಂಜೆ 4.30ಕ್ಕೆ ಸಕಲೇಶಪುರ, ರಾತ್ರಿ 7.20ಕ್ಕೆ ಹಾಸನ ತಲುಪಲಿದೆ. ಹಾಸನದಿಂದ 7.30ಕ್ಕೆ ಹೊರಟ ರೈಲು ರಾತ್ರಿ 11 ಗಂಟೆಗೆ ಯಶವಂತಪುರ ತಲುಪುವ ವೇಳಾಪಟ್ಟಿ ಪ್ರಕಟಿಸಲಾಗಿದೆ.

ದೇಶದ ವಿವಿಧ ಭಾಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್​ ರೈಲುಗಳು ಯಶಸ್ವಿಯಾಗಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು–ಬೆಂಗಳೂರು ನಡುವೆಯೂ ಇಂತಹ ಆಧುನಿಕ ರೈಲು ಸೇವೆ ಆರಂಭಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿತ್ತು. ವಿಶೇಷವಾಗಿ ಈ ಮಾರ್ಗದ ಸಂಪೂರ್ಣ ವಿದ್ಯುದ್ದೀಕರಣ ಪೂರ್ಣಗೊಂಡ ಬಳಿಕ ವಂದೇ ಭಾರತ್ ಸಂಚಾರದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿತ್ತು.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣ ಹಾಗೂ ಕ್ಯಾ.ಬ್ರಿಜೇಶ್​ ಚೌಟ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ಕುರಿತು ಹಿಂದೆ ಹಲವು ಬಾರಿ ಆಶಾದಾಯಕ ಹೇಳಿಕೆಗಳನ್ನು ನೀಡಿದ್ದರು. ಇದೀಗ ಪ್ರಾಯೋಗಿಕ ಸಂಚಾರ ಘೋಷಣೆಯೊಂದಿಗೆ ಆ ಕನಸು ಸಾಕಾರಗೊಳ್ಳುವ ಹಂತಕ್ಕೆ ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments