ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಜೂ.10 ರವರೆಗೆ 4 ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವರುಣನ ಅಬ್ಬರ ಹೆಚ್ಚಾಗಲಿದ್ದು, ಹವಾಮಾನ ಇಲಾಖೆಯು ಈ ಭಾಗಗಳಿಗೆ ‘ರೆಡ್ ಅಲರ್ಟ್’ ಘೋಷಿಸಿದೆ.
ನಗರದ ಹವಾಮಾನ ಕೇಂದ್ರ ಭಾನುವಾರ ಬಿಡುಗಡೆ ಮಾಡಿರುವ ಮುಂದಿನ ನಾಲ್ಕು ದಿನಗಳ ಮುನ್ಸೂಚನೆ ಪ್ರಕಾರ, ದಿನದಿಂದ ದಿನಕ್ಕೆ ಮಳೆಯ ತೀವ್ರತೆ ಹೆಚ್ಚಾಗುವ ಲಕ್ಷಣಗಳಿವೆ.
ಕೇವಲ ಮಳೆಯಲ್ಲದೆ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಗುಡುಗು, ಸಿಡಿಲು ಹಾಗೂ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಎಚ್ಚರಿಕೆಯನ್ನು ಇಲಾಖೆ ನೀಡಿದೆ.
ಕರಾವಳಿ, ಮಲೆನಾಡು ಹಾಗೂ ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಇರಲಿದ್ದು, ಭಾರಿ ಮಳೆಯಾಗುವ ಸಾಧ್ಯತೆಯಿದೆ.
2 ಜಿಲ್ಲೆಗಳಿಗೆ ರೆಡ್ ಅಲರ್ಟ್:
ಸೋಮವಾರ ಮಳೆಯ ಅಬ್ಬರ ಹೆಚ್ಚಾಗಲಿದೆ. ಕರಾವಳಿಯ ಎರಡು ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಘೋಷಿಸಿದೆ. ಈ ಭಾಗಗಳಲ್ಲಿ 204.5 ಮಿ.ಮೀ ಗಿಂತ ಹೆಚ್ಚು ವಿಪರೀತ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಆರೆಂಜ್ ಅಲರ್ಟ್ ಮುಂದುವರಿಯಲಿದೆ.
5 ಜಿಲ್ಲೆಗಳಿಗೆ ವಿಸ್ತರಣೆ:
ಮಂಗಳವಾರ ಮಳೆಯ ಅಬ್ಬರ ತಾರಕಕ್ಕೇರಲಿದ್ದು, ರೆಡ್ ಅಲರ್ಟ್ ವ್ಯಾಪ್ತಿ 5 ಜಿಲ್ಲೆಗಳಿಗೆ ವಿಸ್ತರಣೆಯಾಗಲಿದೆ.ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗಲಿದ್ದು, ‘ರೆಡ್ ಅಲರ್ಟ್’ ನೀಡಲಾಗಿದೆ.
ಬೆಳಗಾವಿಗೂ ಕಂಟಕ:
ಜೂನ್ 10 ರಂದು ಭಾರಿ ಮಳೆಯ ಪ್ರಭಾವ ಉತ್ತರ ಕರ್ನಾಟಕದತ್ತ ವಾಲಲಿದೆ. ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜೊತೆಗೆ, ಬೆಳಗಾವಿ ಜಿಲ್ಲೆಗೂ ‘ರೆಡ್ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಒಳನಾಡಿಗೆ ನಿರಾಳ:
ಒಂದೆಡೆ ಕರಾವಳಿಯಲ್ಲಿ ವಿಪರೀತ ಮಳೆಯ ಎಚ್ಚರಿಕೆ ಇದ್ದರೆ, ರಾಜಧಾನಿ ಬೆಂಗಳೂರು (ನಗರ ಮತ್ತು ಗ್ರಾಮಾಂತರ), ಮೈಸೂರು, ಮಂಡ್ಯ, ತುಮಕೂರು, ರಾಮನಗರ, ಹಾಸನ ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಯಾವುದೇ ಪ್ರಮುಖ ಮುನ್ನೆಚ್ಚರಿಕೆಗಳಿಲ್ಲ. ಈ ಭಾಗಗಳಲ್ಲಿ ಕೇವಲ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.
ಹೈ-ಅಲರ್ಟ್ ಸೂಚನೆ:
ವಿಪತ್ತು ನಿರ್ವಹಣೆಗೆ ಆಡಳಿತ ಯಂತ್ರ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕಿದೆ. ಅತಿ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ, ನದಿ ಪಾತ್ರಗಳಲ್ಲಿ ಪ್ರವಾಹ ಉಂಟಾಗುವ ಹಾಗೂ ಗುಡ್ಡ ಕುಸಿಯುವ ಅಪಾಯವಿರುವುದರಿಂದ ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲಾಡಳಿತಗಳು ಹಾಗೂ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.



