ಬೆಳಗಾವಿ: ವಂಚನೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್ 40,700 ಜನರಿಂದ 2,400 ಕೋಟಿ ಹಣ ಹೂಡಿಕೆ ಮಾಡಿಸಿಕೊಂಡಿದ್ದಾನೆ ಎಂದು ಸಿಐಡಿ ಡಿಐಜಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸದಾಗಿ ಬಂದ ಹಣದಲ್ಲಿ ಹಳಬರಿಗೆ ಬಡ್ಡಿ ಕೊಡುತ್ತಿದ್ದ. ಸಂಗ್ರಹಿಸುತ್ತಿದ್ದ ಹಣಕ್ಕಿಂತ ಬಡ್ಡಿ ಕೊಡುವ ಹಣ ಹೆಚ್ಚಾದರೆ ಆಗ ಕೊಡವುದನ್ನು ನಿಲ್ಲಿಸುತ್ತಿದ್ದರು ಎಂದು ವಿವರಿಸಿದರು.
ಶಿವಾನಂದ ನೀಲಣ್ಣನವರ್ ಇಲ್ಲಿವರೆಗೂ ಸಾರ್ವಜನಿಕರಿಂದ 2,400 ಕೋಟಿ ಹಣ ಸಂಗ್ರಹಿಸಿದ್ದಾನೆ. ಇದರಲ್ಲಿ ಸುಮಾರು ದುಡ್ಡು ಸಾರ್ವಜನಿಕರಿಗೆ ಹಿಂದಿರುಗಿಸಿದ್ದಾನೆ. 540 ಕೋಟಿ ಹಣ ಷೇರು ಮಾರುಕಟ್ಟೆಯಲ್ಲಿ ಹಾಕಿದ್ದಾನೆ. ಇದರಲ್ಲಿ 170 ಕೋಟಿ ಹಣ ಕಳೆದುಕೊಂಡಿದ್ದಾನೆ. ಇಲ್ಲಿವರೆಗೂ ತನಿಖೆಯಲ್ಲಿ 660 ಕೋಟಿ ಹಣ ಕೊರತೆ ಕಂಡು ಬಂದಿದೆ. 330 ಕೋಟಿ ರಿಕವರಿ ಆಗುತ್ತದೆ ಎಂದು ಅವರು ಹೇಳಿದರು.
ಶಿವಾನಂದ ಜೊತೆ ಇನ್ನೊಬ್ಬ ಪಾಟ್ನರ್ ಇದ್ದಾನೆ. ಕಂಪನಿಯಿಂದ ಅಕ್ರಮವಾಗಿ ಶಿವಾನಂದ ನೀಲಣ್ಣವರ ಸ್ವಂತಕ್ಕೆ 55 ಕೋಟಿ ಹಣ ಹಾಕಿಸಿಕೊಂಡಿದ್ದಾನೆ. ಈಗಾಗಲೇ ಐದು ಐಷಾರಾಮಿ ಕಾರು ಜಪ್ತಿ ಮಾಡಿಕೊಂಡಿದ್ದೇವೆ. 11 ವೋಲ್ವೋ ಎಕ್ ಸಿ 90 ಕಾರು ಖರೀದಿ ಮಾಡಿದ್ದು, ಅವುಗಳನ್ನ ಕೂಡ ಶೀಘ್ರದಲ್ಲಿ ಜಪ್ತಿ ಮಾಡುತ್ತೇವೆ. ಇಲ್ಲಿವರೆಗೂ 400 ಕೋಟಿ ಹೆಚ್ಚುವರಿಯಾಗಿ ಹೂಡಿಕೆದಾರರಿಗೆ ಹೋಗಿದೆ. ಆ ಹಣವನ್ನು ವಾಪಸ್ ಪಡೆದು ಇನ್ನುಳಿದ ಹೂಡಿಕೆದಾರರಿಗೆ ನೀಡುತ್ತೇವೆ ಎಂದು ತಿಳಿಸಿದರು.
ಎಫ್ಐಆರ್ ಆದ ಮೇಲೆ ನಾಲ್ಕೈದು ಕೋಟಿ ಹಣ ಡೆಪಾಸಿಟ್ ಆಗಿದೆ. 30 ಅಕೌಂಟ್ ಸಿಕ್ಕಿದ್ದು, ಇದರಲ್ಲಿ 7 ಅಕೌಂಟ್ಗಳಲ್ಲಿ ಹೆಚ್ಚಿನ ಹಣ ವರ್ಗಾವಣೆ ಆಗಿದೆ. 36,200 ಪೇಜ್ ಒಂದೇ ಅಕೌಂಟ್ನಲ್ಲಿ ಆಗಿದ್ದು ತನಿಖೆ ನಡೆಯುತ್ತಿದೆ. ಸಿನೆಮಾ ಸ್ಟಾರ್ಗಳಿಗೆ ಅಸೋಸಿಯೇಟ್ ದಿಂದ ಹಣ ಹೋಗಿದ್ದರೆ ಅವರಿಗೂ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದುಕೊಳ್ಳುತ್ತೇವೆ. ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಹೂಡಿಕೆ ಇದೆ. ಮಹಾರಾಷ್ಟ್ರ ಪೊಲೀಸರ ಸಹಕಾರ ಪಡೆದು ತನಿಖೆ ಮಾಡುತ್ತಿದ್ದೇವೆ ಎಂದು ಡಾ.ಭೀಮಾಶಂಕರ ಗುಳೇದ್ ಹೇಳಿದರು.
ರಿಕವರಿ ಬಳಿಕ ಬಡ್ಸ್ ಕಾಯ್ದೆ ಮುಖ್ಯಸ್ಥ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರಿಗೆ ನೀಡುತ್ತೇವೆ. ಅವರು ಸಾರ್ವಜನಿಕರಿಗೆ ಹಣ ವಾಪಸ್ ಕೊಡುತ್ತಾರೆ. ಕಂಪನಿ ಮುಳುಗುವ ಮುನ್ನ ಜಿಲ್ಲಾಡಳಿತ ದಾಳಿ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಂಡಿದೆ ಎಂದು ಡಾ.ಭೀಮಾಶಂಕರ ಗುಳೇದ ಶ್ಲಾಘಿಸಿದರು.
ಶಿವಾನಂದ ನೀಲಣ್ಣವರ ಇಲ್ಲಿವರೆಗೂ ಸಾರ್ವಜನಿಕರಿಗೆ ದುಡ್ಡು ತಲುಪಿಸುತ್ತಿದ್ದ. ಆತನ ವಿರುದ್ಧ ಜಿಲ್ಲಾಡಳಿತ ಪಿತೂರಿ ಮಾಡಿದೆ ಎಂದು ಕಪೋಲಕಲ್ಪಿತವಾಗಿ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ಆಗುತ್ತಿದೆ. ಈ ರೀತಿ ಚರ್ಚೆ ಮಾಡುವರಿಗೂ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯುತ್ತೇವೆ ಎಂದು ಸಿಐಡಿ ಡಿಐಜಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಆರ್ ಬಿಐದಿಂದ ಅನುಮತಿ ಪಡೆಯದೇ ಠೇವಣಿ ತೆಗೆದುಕೊಳ್ಳುವುದು ಅಪರಾಧ. ಎರಡು ದಿನದ ಹಿಂದೆ ಮತ್ತೊಂದು ಇದೇ ರೀತಿ ಪ್ರಕರಣ ಪತ್ತೆಯಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿದ್ದು, ಅದು ಸಿಐಡಿಗೆ ಬರುತ್ತದೆ. ಆರ್‌ಬಿಐದಿಂದ ಅವಶ್ಯಕ ಬ್ಯಾಂಕಿಂಗ್ ಅನುಮತಿ ಪಡೆಯದೇ ಹಣ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು.
ಶಿವಂ ಅಸೋಸಿಯೇಟ್ಸ್ ಮತ್ತು ಆದಿತ್ಯರಾಜ್ ಕ್ಯಾಪಿಟಲ್ ಎರಡೂ ಕಂಪನಿ ಅನುಮತಿ ಪಡೆದಿಲ್ಲ. 36 ಪರ್ಸೆಂಟ್, 60 ಪರ್ಸೆಂಟ್ ಲಾಭ ಕೊಡುವುದು ಯಾವ ವ್ಯವಹಾರದಲ್ಲೂ ಸಿಗಲ್ಲ. ಸಾರ್ವಜನಿಕರು ಇಂತವರಿಂದ ದೂರ ಇರಬೇಕು. ಇಂತವರು ಯಾರಾದರೂ ಬಂದು ಪ್ರೇರೇಪಣೆ ಮಾಡಿದ್ರೆ ದೂರು ನೀಡಿ ಎಂದು ಡಾ.ಭೀಮಾಶಂಕರ ಗುಳೇದ ಮನವಿ ಮಾಡಿಕೊಂಡರು.
ವಂಚನೆ ಆಗಿದ್ದರೂ ಹಣ ಹೂಡಿಕೆ
ಸಾಮಾನ್ಯವಾಗಿ ತನಿಖೆ ನಡೆಯುವಾಗ ಸುದ್ದಿಗೋಷ್ಠಿ ಮಾಡಲ್ಲ. ಆದರೆ ಇವತ್ತಿಗೂ ಶಿವಂ ಅಸೋಸಿಯೇಟ್ ಕಂಪನಿಗೆ ದುಡ್ಡು ಹಾಕಿದವರು ಬೇರೊಬ್ಬರಿಗೆ ಪ್ರೇರೇಪಣೆ ನೀಡಿ ಹಣ ಹಾಕಿಸುತ್ತಿದ್ದಾರೆ. ಇದೇ ಕಾರಣಕ್ಕೆ ಅನಿವಾರ್ಯವಾಗಿ ಸುದ್ದಿಗೋಷ್ಠಿ ನಡೆಸಿ ಸಾರ್ವಜನಿಕರನ್ನು ಎಚ್ಚಿಸುತ್ತಿದ್ದೇವೆ ಎಂದು ಅವರು ಹೇಳಿದರು.



