ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಮೂರನೇ ಮಾರ್ಗವಾದ ಹಳದಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10ರಂದು ಉದ್ಘಾಟಿಸಲಿದ್ದಾರೆ.
ಬೆಂಗಳೂರು ದಕ್ಷಿಣ ಭಾಗ ಸಂಪರ್ಕಿಸಲಿರುವ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ವಿಸ್ತರಿಸಿರುವ ಈ ಮಾರ್ಗವು 16 ನಿಲ್ದಾಣಗಳನ್ನು ಹೊಂದಿದೆ. ಸಿಲ್ಕ್ ಬೋರ್ಡ್ ಸೇರಿದಂತೆ ನಗರದ ಪ್ರಮುಖ ಟ್ರಾಫಿಕ್ ಸಮಸ್ಯೆಯಿಂದ ಪ್ರಯಾಣಿಕರಿಗೆ ಪರ್ಯಾಯ ಮಾರ್ಗ ಲಭಿಸಿದಂತೆ ಆಗಿದೆ.
ನಮ್ಮ ಮೆಟ್ರೋದ ಹಳದಿ ಮಾರ್ಗವು ಪ್ರತಿ ೨೫ ನಿಮಿಷಕ್ಕೆ ಒಂದು ಸಂಚರಿಸಲಿದ್ದು, ಆರ್.ವಿ ರೋಡ್, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲುಗೇಟ್, ಸಿಂಗಸಂದ್ರ, ಹೊಸರೋಡ್, ಬೇರೆಟೇನಾ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಇನ್ಫೋಸಿಸ್ ಫೌಂಡೇಶನ್ ಕೊನಪ್ಪನ ಅಗ್ರಹಾರ, ಹೂಸ್ಕೂರು ರೋಡ್, ಬಯೋಕಾನ್ ಹೆಬ್ಬಗೋಡಿ ಮತ್ತು ಬೊಮ್ಮಸಂದ್ರ ನಿಲ್ದಾಣ ಸಂಪರ್ಕಿಸಲಿದೆ.
ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗೆ ಸುಮಾರು 5,056.99 ಕೋಟಿ ವೆಚ್ಚದಲ್ಲಿ ಸುಮಾರು 19.15 ಕಿಲೋ ಮೀಟರ್ ಉದ್ದದ ಮೆಟ್ರೋ ಹಳದಿ ಮಾರ್ಗ ನಿರ್ಮಾಣ ಮಾಡಲಾಗಿದೆ. ಇತ್ತೀಚೆಗೆ ಈ ಮಾರ್ಗದ ಪರೀಕ್ಷಾ ಸಂಚಾರ ಯಶಸ್ವಿಯಾಗಿ ನಡೆದಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ಈಗಾಗಲೇ ಹಳದಿ ಮಾರ್ಗದ ಸುರಕ್ಷತಾ ತಪಾಸಣೆ ಯಶಸ್ವಿವಾಗಿದೆ. ಆಗಸ್ಟ್ 10 ರಂದು ಪ್ರಧಾನಿ ಮೋದಿ ಅವರು ಉದ್ಘಾಟಿಸಲಿದ್ದು, ಬೆಂಗಳೂರು ದಕ್ಷಿಣ ಭಾಗಕ್ಕೆ ಒಂದು ಮಹತ್ವ ಕ್ಷಣವಾಗಲಿದೆ. ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಯಾವಾಗಲೂ ಆದ್ಯತೆ ನೀಡಿದ್ದಕ್ಕಾಗಿ ಬೆಂಗಳೂರಿನ ಎಲ್ಲಾ ಜನರ ಪರವಾಗಿ ನಾನು ಪ್ರಧಾನಿಯವರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.



