ಕನ್ನಡ ಚಿತ್ರರಂಗದ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿಯ ಬಟ್ಟೆ ಹರಿದು ದೌರ್ಜನ್ಯ ಎಸಗಿದ ನಿರ್ಮಾಪಕ ಹಾಗೂ ಎವಿಆರ್ ಗ್ರೂಪ್ ಸಂಸ್ಥಾಪಕ ಅರವಿಂದ್ ರೆಡ್ಡಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
2021ರಲ್ಲಿ ನಟಿ ಪರಿಚಯ ಮಾಡಿಕೊಂಡ ಅರವಿಂದ್ ರೆಡ್ಡಿ ಜೊತೆಗಿನ ಸಂಪರ್ಕ 2022ರಲ್ಲಿ ಮುರಿದಿತ್ತು. ನಂತರ ಮತ್ತೆ ಸಂಪರ್ಕ ಬೆಳೆಸಿದ್ದ ಅರವಿಂದ್ ರೆಡ್ಡಿ ಇತ್ತೀಚೆಗೆ ಅವಾಚ್ಯ ನಿಂದನೆ ಹಾಗೂ ಮಾನಸಿಕ ಕಿರುಕುಳ ನೀಡಿದ್ದೂ ಅಲ್ಲದೇ ಮದುವೆ ಆಗುತ್ತೇನೆ ಎಂದು ಪ್ರಪೋಸ್ ಮಾಡಿದ್ದ.
ಅರವಿಂದ್ ರೆಡ್ಡಿ ವರ್ತನೆಯಿಂದ ಬೇಸತ್ತು ನಟಿ ಆತ್ಮಹತ್ಯೆಗೂ ಯತ್ನಿಸಿದ್ದರು. ಆದರೆ ಇತ್ತೀಚೆಗೆ ನಟಿಯ ಮೇಲೆ ಹಲ್ಲೆ ಮಾಡಿದ್ದೂ ಅಲ್ಲದೇ ಬಟ್ಟೆ ಹರಿದು ಅಪಮಾನ ಮಾಡಿದ್ದ. ಈ ಹಿನ್ನೆಲೆಯಲ್ಲಿ ನಟಿ ಕಳೆದ ತಿಂಗಳು 17ರಂದು ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಎಸಿಪಿ ಚಂದನ್ ನೇತೃತ್ವದ ಪೊಲೀಸ್ ತಂಡ ಶ್ರೀಲಂಕದಿಂದ ಬೆಂಗಳೂರಿಗೆ ಮರಳಿದ ಅರವಿಂದ್ ರೆಡ್ಡಿಯನ್ನು ಬಂಧಿಸಿದ್ದಾರೆ.
ಕನ್ನಡದಲ್ಲಿ 9ಕ್ಕೂ ಅಧಿಕ ಸಿನಿಮಾಗಳಲ್ಲಿ ಈ ನಟಿ ಅಭಿನಯಿಸಿದ್ದಾರೆ. 2022ರಲ್ಲಿ ಶ್ರೀಲಂಕಾದಲ್ಲಿ ನಡೆದ ‘ಲಾರ್ಸ್ ಕ್ರಿಕೆಟ್ ಕಪ್’ ಉದ್ಘಾಟನೆಗೆ ಬರುವಂತೆ ಅರವಿಂದ್ ನಟಿ ಬಳಿ ಕೇಳಿದ್ದ. ಅಂತೆಯೇ ನಟಿ ತೆರಳಿದ್ದರು. ಅಲ್ಲಿಂದ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಅಲ್ಲಿಂದ ಪ್ರೀತಿ-ಕಾಳಜಿಯಿಂದ ಅರವಿಂದ್ ನಡೆದುಕೊಳ್ಳುತ್ತಿರು ಎಂದು ಹೇಳಲಾಗಿದೆ. 2022ರ ಆಗಸ್ಟ್ನಲ್ಲಿ ಅರವಿಂದ್ ನಟಿಯ ಜೊತೆ ಸಂಪರ್ಕ ಕಳೆದುಕೊಂಡ. ಇದಕ್ಕೆ ಕಾರಣ ನಟಿಗೆ ತಿಳಿದಿರಲಿಲ್ಲ.
ನಂತರ ಅರವಿಂದ್ ಮತ್ತೆ ನಟಿಯ ಜೊತೆ ಸಂಪರ್ಕ ಬೆಳೆಸಿದ್ದೂ ಅಲ್ಲದೆ, ನಟಿಗೆ ಕಿರುಕುಳ ನೀಡಲು ಶುರು ಮಾಡಿದ್ದ. ಆತನ ಮಾನಸಿಕ ಸ್ಥಿತಿ ಹಾಗೂ ಕುಡಿತದ ಚಟದ ಬಗ್ಗೆ ನಟಿಗೆ ಆಗ ಗೊತ್ತಾಯಿತು. 2024ರಲ್ಲಿ ಒಮ್ಮೆ ಅರವಿಂದ್ ನಟಿಗೆ ಕರೆ ಮಾಡಿದ್ದೂ ಅಲ್ಲದೆ, ನಿನ್ನನ್ನು ಮದುವೆ ಆಗುತ್ತೇನೆ ಎಂದು ಹೇಳಿದ್ದ. ಇದರಿಂದ ಭಯಗೊಂಡ ನಟಿ ನೂರು ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಂತೆ. ಈ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.
ನಂತರ ಅರವಿಂದ್ ಮನೆಗೆ ಬಂದು ನಟಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದ. ಈ ವಿಚಾರವನ್ನು ನಟಿಯ ಮನೆಯವರಿಗೆ ಹೇಳಲು ಅವಕಾಶವನ್ನೇ ನೀಡಿರಲಿಲ್ಲವಂತೆ. ಕರೆ ಮಾಡುತ್ತೇನೆ ಮೊಬೈಲ್ ಕೊಡು ಎಂದು ನಟಿ ಹೇಳಿದಾಗ, ಅರವಿಂದ್ ಏಕಾಏಕಿ ನಟಿಯ ಮೇಲೆ ಮೇಲೆ ಹಲ್ಲೆ ಮಾಡಿದ್ದೂ ಅಲ್ಲದೆ. ಬಟ್ಟೆ ಹರಿದು ಅರೆಬೆತ್ತಲೆ ಮಾಡಿದ್ದ.
ನಟಿ ಬೇರೆ ದಾರಿ ಕಾಣದೆ ತಾಯಿ ಬಳಿ ವಿಚಾರ ಹೇಳಿಕೊಂಡಿದ್ದು, ಆಗ ಅರವಿಂದ್, ‘ನಟಿ ನನ್ನಿಂದ ಸಾಕಷ್ಟು ಖರ್ಚು ಮಾಡಿಸಿದ್ದಾಳೆ. ಕೋಟಿ ರೂಪಾಯಿ ಕೊಡಬೇಕು’ ಎಂದು ಬೆದರಿಕೆ ಹಾಕಿದ್ದ. ನಂತರ ನಟಿ ಹಾಗೂ ಅವರ ಗೆಳೆಯರ ಬಗ್ಗೆ ಇಲ್ಲಸಲ್ಲದ ಆರೋಪವನ್ನು ಅರವಿಂದ್ ಮಾಡಿ ಯಾರ ಜೊತೆಗೆಲ್ಲಾ ಸಂಬಂಧ ಇದೆ ಎಂದು ಅಶ್ಲೀಲವಾಗಿ ನಿಂದಿಸಿದ್ದ. ಈ ಎಲ್ಲಾ ಕಾರಣಕ್ಕೆ ಅವರನ್ನು ಬಂಧಿಸುವಂತೆ ನಟಿ ಕೋರಿದ್ದರು.
ಅರವಿಂದ್ ರಿಯಲ್ ಎಸ್ಟೇಟ್ ಉದ್ಯಮಿ. ‘ಮಹಾರಾಜ ಬಳ್ಳಾರಿ ಟಸ್ಕರ್ಸ್’ ಕ್ರಿಕೆಟ್ ತಂಡದ ನಾಯಕ ಕೂಡ ಹೌದು. ಆತ ಸಿನಿಮಾ ನಿರ್ಮಾಪಕ ಕೂಡ ಹೌದು. ಚಲನ ಚಿತ್ರ ನಟ, ನಟಿಯರಿಗಾಗಿಯೇ ಹಲವು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದ.



