ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಭಾಗವಹಿಸುವುದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ರದ್ದುಗೊಂಡಿದೆ.
ಬೆಂಗಳೂರಿನ ಜಿಕೆವಿಕೆ ಬಳಿ ಮಂಗಳವಾರ ನಡೆಯಬೇಕಿದ್ದ ಕೃಷಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ದಲಿತ ಸಂಘಟನೆ ಮತ್ತು ಕೃಷಿ ವಿವಿ ಮಂಡಳಿ ಸದಸ್ಯರ ವಿರೋಧದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ.
ಚಕ್ರವರ್ತಿ ಸೂಲಿಬೆಲೆ ಭಾಗವಹಿಸುವುದನ್ನು ವಿರೋಧಿಸಿ ದಲಿತ ಸಂಘಟನೆ, ಕೃಷಿ ವಿವಿ ಬೋರ್ಡ್ ಸದಸ್ಯರು ವಿಶ್ವ ವಿದ್ಯಾಲಯದ ಗೇಟ್ ಮುಂದೆ ಧರಣಿ ನಡೆಸಿದರು. ಪ್ರತಿಭಟನಾಕಾರರಿಗೆ ಮಣಿದ ಸಂಘಟಕರು ಕಾರ್ಯಕ್ರಮ ರದ್ದುಗೊಳಿಸಿದರು. ಕಾರ್ಯಕ್ರಮ ರದ್ದಾದರೂ ಸಂಘಟಕರ ವಿರುದ್ಧ ಪ್ರತಿಭಟನೆ ಮುಂದುವರಿಸಿದ್ದರಿಂದ ಉಪನಗರ ಠಾಣೆಯ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ಕೃಷಿ ವಿವಿ ಕುಲಪತಿ ಪಿ.ಎಲ್. ಪಾಟೀಲ್ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ನಡೆಯುವ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಗಿಯಾಗುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಸ್ಥಳೀಯ ಶಾಸಕರು, ಸಚಿವರನ್ನು ಕರೆಯದೆ ಸೂಲಿಬೆಯವರನ್ನೇ ಕರೆದಿದ್ದು ಯಾಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ. ಮನವಿ ಸ್ವೀಕರಿಸಲು ಬಂದಿದ್ದ ಡೀನ್ರನ್ನು ಕೂಡ ತರಾಟೆಗೆ ಪಡೆಯಲಾಗಿದ್ದು, ಕುಲಪತಿಗಳೇ ಬಂದು ನಮ್ಮ ಮನವಿ ಸ್ವೀಕಾರ ಮಾಡಲಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ವೇಳೆ ಕೆಲ ಉದ್ರಿಕ್ತರು ವಿಶ್ವವಿದ್ಯಾಲಯದ ಗೇಟ್ ಏರಿ ಪ್ರತಿಭಟನೆ ನಡೆಸಿದ ಕಾರಣ ಹೈಡ್ರಾಮಾ ನಡೆಯಿತು.
ಸಮಾಜದಲ್ಲಿ ಕೋಮು ಗಲಭೆಗೆ ಕಾರಣವಾಗುವಂತವರನ್ನು ಕರೆದು ವಿಶ್ವ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಸಬಾರದು. ಅದರ ಬದಲು, ಕೃಷಿ ಸಾಧಕರನ್ನೋ, ವಿಜ್ಞಾನಿಗಳನ್ನೋ ಕರೆಸಬಹುದಿತ್ತು. ಸಿಂಡಿಕೇಟ್ ಮೆಂಬರ್ಗಳಿಗೆ ತಿಳಿಸದೆ ಕುಲಪತಿಗಳು ಕಾರ್ಯಕ್ರಮ ಮಾಡಲು ಹೊರಟಿದ್ದಾರೆ.
ಉದ್ಧಟತನ ಮುಂದುವರಿಸಿದರೆ ಅವರ ಕಚೇರಿಗೆ ನುಗ್ಗಿ ದಾಂಧಲೆ ನಡೆಸುತ್ತೇವೆ ಎಂದು ಡಿಎಸ್ಎಸ್ ಮುಖಂಡ ಪರಮೇಶ್ ಎಚ್ಚರಿಸಿದ್ದಾರೆ. ಮೊನ್ನೆ ನಡೆದ ಬೋರ್ಡ್ ಮೀಟಿಂಗ್ನಲ್ಲಿಯೂ ಕುಲಪತಿಗಳು ಈ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಶಿಷ್ಟಾಚಾರ ಉಲ್ಲಂಘಿಸಿ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮಗಳನ್ನು ಮಾಡಲಾಗ್ತಿದೆ. ಚಕ್ರವರ್ತಿ ಸೂಲಿಬೆಲೆ ಏನು ಚಿನ್ನದ ರಸ್ತೆ ಮಾಡಲು ಇಲ್ಲಿ ಬರುತ್ತಿದಾರಾ? ಎಂದು ಸಿಂಡಿಕೇಟ್ ಸದಸ್ಯ ರವಿ ಪ್ರಶ್ನಿಸಿದ್ದಾರೆ.



