ಚೆನ್ನೈ: ಸಂಘಟಿತ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ರನ್ ಗಳ ಭಾರೀ ಅಂತರದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ.
ಚೆಪಾಕ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 196 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 146 ರನ್ ಗಳಿಸಲಷ್ಟೇ ಶಕ್ತವಾಯಿತು.
2008ರಲ್ಲಿ 14 ರನ್ ಗಳಿಂದ ಗೆದ್ದಿದ್ದ ಆರ್ ಸಿಬಿಗೆ ಇದು ಚೆನ್ನೈ ವಿರುದ್ಧ ಐಪಿಎಲ್ ಇತಿಹಾಸದಲ್ಲೇ ಅತೀ ದೊಡ್ಡ ಗೆಲುವಾಗಿದೆ. ಅಲ್ಲದೇ ಚೆನ್ನೈ ತಂಡವನ್ನು ಸತತ 2ನೇ ಬಾರಿ ತವರಿನಲ್ಲಿ ಸೋಲಿಸಿದೆ.
ಆರ್ ಸಿಬಿ ಶಿಸ್ತಿನ ದಾಳಿಗೆ ತತ್ತರಿಸಿದ ಚೆನ್ನೈ ತಂಡ ಆರಂಭದಿಂದಲೇ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಯಾವುದೇ ಹಂತದಲ್ಲೂ ಚೇತರಿಸಿಕೊಳ್ಳುವ ಸೂಚನೆ ನೀಡದ ಚೆನ್ನೈ ಮುಗ್ಗರಿಸಿತು.
ಚೆನ್ನೈ ಪರ ರಚಿನ್ ರವೀಂದ್ರ (41) ಮಾತ್ರ ತಕ್ಕಮಟ್ಟಿಗೆ ಪ್ರದರ್ಶನ ನೀಡಿದರೆ, ಕೊನೆಯ ಓವರ್ ನಲ್ಲಿ ಸತತ 2 ಸಿಕ್ಸರ್ ಸೇರಿದಂತೆ 16 ಎಸೆತದಲ್ಲಿ ಅಜೇಯ 30 ರನ್ ಬಾರಿಸಿ ಧೋನಿ ಗಮನ ಸೆಳೆದರು. ರವೀಂದ್ರ ಜಡೇಜಾ (25), ಶಿವಂ ದುಬೆ (19) ಎರಡಂಕಿಯ ಮೊತ್ತ ದಾಟಿದರು.
ಆರ್ ಸಿಬಿ ಪರ ಜೋಸ್ ಹಾಜೆಲ್ ವುಡ್ 3 ವಿಕೆಟ್ ಪಡೆದು ಮತ್ತೊಮ್ಮೆ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರೆ, ಲಿಯಾಮ್ ಲಿವಿಂಗ್ ಸ್ಟೋನ್, ಯಶ್ ದಯಾಲ್ ತಲಾ 2 ಮತ್ತು ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟ್ಸ್ ಮನ್ ಗಳ ಸಮಯೋಚಿತ ಪ್ರದರ್ಶನದಿಂಧ ಬೃಹತ್ ಮೊತ್ತ ಪೇರಿಸಿತು
ಆರ್ ಸಿಬಿಗೆ ಫಿಲ್ ಸಾಲ್ಟ್ 16 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ 32 ರನ್ ಗಳಿಸಿ ಸ್ಫೋಟಕ ಆರಂಭ ನೀಡಿ ನಿರ್ಗಮಿಸಿದರು. ದೇವದತ್ ಪಡಿಕಲ್ 14 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 27 ರನ್ ಗಳಿಸಿದರು.
ಒಂದೆಡೆ ವಿಕೆಟ್ ಉಳಿಸಿಕೊಳ್ಳಲು ನಿಧಾನವಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ 30 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 31 ರನ್ ಬಾರಿಸಿ ಔಟಾದರು. ಈ ಹಂತದಲ್ಲಿ ಆರ್ ಸಿಬಿ 117 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು.
ಈ ಹಂತದಲ್ಲಿ ಚೆನ್ನೈ ಬೌಲರ್ ಗಳು ತಿರುಗೇಟು ನೀಡಿದ್ದರಿಂದ ತಂಡ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಅನುಭವಿಸಿದ್ದರಿಂದ ರನ್ ವೇಗದಲ್ಲಿ ಕುಸಿತ ಕಂಡಿತು. ಈ ಹಂತದಲ್ಲಿ ನಾಯಕ ರಜತ್ ಪಟಿದಾರ್ 32 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 51 ರನ್ ಬಾರಿಸಿ ಅರ್ಧಶತಕದ ಗೌರವದೊಂದಿಗೆ ನಿರ್ಗಮಿಸಿದರು. ಕೊನೆಯ ಹಂತದಲ್ಲಿ ಟಿಮ್ ಡೇವಿಡ್ ಕೊನೆಯ ಓವರ್ ನಲ್ಲಿ ಸತತ 3 ಸಿಕ್ಸರ್ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ಸಮೀಪ ತಂದು ನಿಲ್ಲಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ನೂರ್ ಅಹ್ಮದ್ 3 ವಿಕೆಟ್ ಪಡೆದು ಮಿಂಚಿದರೆ, ಮಹೇಶ ಪತಿರಾಣ 2 ವಿಕೆಟ್ ಗಳಿಸಿದರು.