ಸರ್ವಾಂಗೀಣ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್ ಆರ್ ಸಿಬಿ ತಂಡ 23 ರನ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಧರ್ಮಶಾಲಾದಲ್ಲಿ ಭಾನುವಾರ ನಡೆದ ಮಹತ್ವದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 222 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 188 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಗೆಲುವಿನೊಂದಿಗೆ ಆರ್ ಸಿಬಿ ಆಡಿದ 13 ಪಂದ್ಯಗಳಲ್ಲಿ 9 ಜಯ ಹಾಗೂ 4 ಸೋಲು ಸೇರಿದಂತೆ 18 ಅಂಕ ಸಂಪಾದಿಸಿ ಪ್ಲೇಆಫ್ ಗೆ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಆರಂಭದಲ್ಲಿ ಸತತ 6 ಗೆದ್ದು ಅಗ್ರಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ ಸತತ 6 ಸೋಲುಗಳಿಂದ 13 ಅಂಕ ಸಂಪಾದಿಸಿ 4ನೇ ಸ್ಥಾನಕ್ಕೆ ಕುಸಿದಿದ್ದು, ಪ್ಲೇಆಫ್ ಪ್ರವೇಶಿಸುವುದು ದುರ್ಗಮವಾಗಿದೆ.



