ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತೀರ್ಮಾನಿಸಿದೆ. ಇದರಿಂದ ಗೃಹ ಸಾಲ ಮುಂತಾದ ಸಾಲದ ಕಂತಿನ ಮೇಲೆ ಯಾವುದೇ ವ್ಯತ್ಯಾಸ ಆಗುವುದಿಲ್ಲ.
ಬುಧವಾರ ನಡೆದ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಬುಧವಾರ ರೆಪೋ ದರ ಪ್ರಸ್ತುತ ಇರುವ ಶೇ.5.5 ಅನ್ನು ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಹಣಕಾಸು ನೀತಿ ಸಮಿತಿಯು ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಜೊತೆಗೆ ತಟಸ್ಥ ಹಣಕಾಸು ನೀತಿ ಮುಂದುವರಿಸಲು ತೀರ್ಮಾನಿಸಿದೆ. ಜಿಎಸ್‌ಟಿ ಪರಿಷ್ಕರಣೆಯು ಹಣದುಬ್ಬರದ ಮೇಲೆ ಪರಿಣಾಮ ಬೀರಲಿದೆ. ಆದರೆ ಬಳಕೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.
“ಉತ್ತಮ ಮುಂಗಾರು ಮಳೆ, ಕಡಿಮೆ ಹಣದುಬ್ಬರ ಮತ್ತು ವಿತ್ತೀಯ ಸಡಿಲಿಕೆಯಿಂದಾಗಿ ಆರ್ಥಿಕ ಬೆಳವಣಿಗೆಯ ಮುನ್ನೋಟವು ಪ್ರಗತಿದಾಯಕವಾಗಿದೆ. ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶೀಯ ಆರ್ಥಿಕ ಚಟುವಟಿಕೆಗಳು ವೇಗವನ್ನು ಕಾಯ್ದುಕೊಳ್ಳುತ್ತಿವೆ” ಎಂದು ಮಲ್ಹೋತ್ರಾ ವಿಶ್ವಾಸ ವ್ಯಕ್ತಪಡಿಸಿದರು.
ಅಮೆರಿಕ ಸುಂಕ ಸಂಬಂಧಿತ ಬೆಳವಣಿಗೆಗಳಿಂದ “ಈ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಅಭಿವೃದ್ಧಿಯನ್ನು ನಿಧಾನಗೊಳಿಸುವ” ಸಾಧ್ಯತೆಯಿದೆ ಎಂದು ಆರ್‌ಬಿಐ ಗವರ್ನರ್ ಅಂದಾಜಿಸಿದ್ದಾರೆ. ಆದರೂ ಕೂಡ ಬಲವಾದ ಹಣದುಬ್ಬರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಚಾಲ್ತಿ ಖಾತೆ ಕೊರತೆಯನ್ನು ಸುಸ್ಥಿರವಾಗಿಡುವ ನಿರೀಕ್ಷೆಯಿದೆ ಎಂದಿದ್ದಾರೆ.
“ಆರ್ಥಿಕ ಬೆಳವಣಿಗೆಯ ಮೇಲೆ ಬಾಹ್ಯ ಅಂಶಗಳ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಲು ಜಿಎಸ್‌ಟಿ ಮತ್ತು ಇತರ ಸುಧಾರಣೆಗಳು ಅನುಕೂಲರವಾಗಲಿವೆ. ಇದೇ ವೇಳೆ ಯುಪಿಐ ಪಾವತಿ ಮೇಲೆ ಶುಲ್ಕ ವಿಧಿಸುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಫೆಬ್ರವರಿ 2025 ರಿಂದ ಹಣಕಾಸು ನೀತಿ ದರವನ್ನು 100 ಬೇಸಿಸ್ ಪಾಯಿಂಟ್‌ಗಳಷ್ಟು ಆರ್‌ಬಿಐ ಕಡಿಮೆ ಮಾಡಿದೆ. ಜೂನ್‌ನಲ್ಲಿ ನಡೆದ ಹಣಕಾಸು ನೀತಿ ಪರಿಷ್ಕರಣೆಯಲ್ಲಿ 50 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿ ರೆಪೋ ದರವನ್ನು ಶೇ.5.5ಕ್ಕೆ ಆರ್‌ಬಿಐ ಇಳಿಸಿತ್ತು.
ಹಣಕಾಸು ನೀತಿ ಸಮಿತಿಯ ಶಿಫಾರಸ್ಸಿನ ಮೇರೆಗೆ ಫೆಬ್ರವರಿ ಮತ್ತು ಏಪ್ರಿಲ್‌ನಲ್ಲಿ ತಲಾ 25 ಬೇಸಿಸ್ ಪಾಯಿಂಟ್ ಹಾಗೂ ಜೂನ್‌ನಲ್ಲಿ 50 ಬೇಸಿಸ್ ಪಾಯಿಂಟ್‌ಗಳಷ್ಟು ರೆಪೋ ದರವನ್ನು ಆರ್‌ಬಿಐ ಕಡಿಮೆ ಮಾಡಿತ್ತು. ಈ ವರ್ಷ ಒಟ್ಟು 100 ಬೇಸಿಸ್ ಪಾಯಿಂಟ್‌ಗಳ ದರ ಕಡಿತವು ಹೊಸ ಸಾಲಗಳಲ್ಲಿ 58 ಬೇಸಿಸ್ ಪಾಯಿಂಟ್‌ಗಳ ಕಡಿತಕ್ಕೆ ಕಾರಣವಾಗಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದರು.
ಈ ವರ್ಷದ ಫೆಬ್ರವರಿಯಿಂದ ಚಿಲ್ಲರೆ ಹಣದುಬ್ಬರವು ಶೇ. 4 ಕ್ಕಿಂತ ಕಡಿಮೆಯಾಗಿದೆ. ಆಹಾರ ಬೆಲೆಗಳ ಸಡಿಲಿಕೆ ಮತ್ತು ಅನುಕೂಲಕರ ಮೂಲ ಪರಿಣಾಮದಿಂದ ಆಗಸ್ಟ್‌ನಲ್ಲಿ ಇದು ಆರು ವರ್ಷಗಳ ಕನಿಷ್ಠ ಮಟ್ಟವಾದ ಶೇ.2.07 ಕ್ಕೆ ಇಳಿದಿದೆ.
2026ರ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇ.2.6 ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಈ ಮೊದಲು ಶೇ.3.1 ಇರಲಿದೆ ಎಂದು ನಿರೀಕ್ಷಿಸಲಾಗಿತ್ತು. ಭಾರತದ ವಿದೇಶೀ ವಿನಿಮಯ ಮೀಸಲು 700.2 ಬಿಲಿಯನ್ ಡಾಲರ್ ಆಗಿದ್ದು, ಇದು 11 ತಿಂಗಳ ಆಮದುಗಳನ್ನು ಪೂರೈಸಲು ಸಾಕಾಗುತ್ತದೆ ಎಂದು ಆರ್‌ಬಿಐ ಗವರ್ನರ್ ತಿಳಿಸಿದರು.
ಆರ್‌ಬಿಐನ ಗವರ್ನರ್ ಸಂಜಯ್ ಮಲ್ಹೋತ್ರ ಅಧ್ಯಕ್ಷತೆಯಲ್ಲಿ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆ ಸೋಮವಾರದಿಂದ ಪ್ರಾರಂಭವಾಗಿದ್ದು, ಇಂದು (ಅಕ್ಟೋಬರ್ 1) ಸಭೆಯ ನಿರ್ಧಾರವು ಪ್ರಕಟವಾಗಿದೆ.
ಆರ್‌ಬಿಐ ಈ ಬಾರಿ ರೆಪೋ ದರ ಕಡಿತಗೊಳಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಫೆಬ್ರುವರಿಯ ನಂತರ ಆರ್‌ಬಿಐ ರೆಪೋ ದರವನ್ನು ಮೂರು ಬಾರಿ ಕಡಿಮೆ ಮಾಡಿತ್ತು. ಆಗಸ್ಟ್ ತಿಂಗಳಲ್ಲಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಈ ಬಾರಿಯೂ ಯಾವುದೇ ಬದಲಾವಣೆ ಮಾಡಿಲ್ಲ.



