ಭಾರತ ತಂಡದ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್ ಮನ್ ರೋಹಿತ್ ಶರ್ಮ ದಿಢೀರನೆ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
ಬುಧವಾರ ಇನ್ ಸ್ಟಾಗ್ರಾಂನಲ್ಲಿ ಭಾವಾನಾತ್ಮಕ ಪೋಸ್ಟ್ ಮಾಡಿರುವ ರೋಹಿತ್ ಶರ್ಮ, ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಟಿ-20 ಕ್ರಿಕೆಟ್ ಗೆ ವಿದಾಯ ಘೋಷಿಸಿರುವ ರೋಹಿತ್ ಶರ್ಮ, ಏಕದಿನ ಕ್ರಿಕೆಟ್ ನಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.
2024ರ ವಿಶ್ವಕಪ್ ಜಯಿಸಿದ ಬೆನ್ನಲ್ಲೇ ಟಿ-20 ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದ ರೋಹಿತ್ ಶರ್ಮ ಇದೀಗ ಒಂದು ವರ್ಷದ ನಂತರ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಮುಂಬರುವ ಇಂಗ್ಲೆಂಡ್ ಟೆಸ್ಟ್ ಸರಣಿಗೆ ತಾವು ಲಭ್ಯರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಟೆಸ್ಟ್ ತಂಡದಲ್ಲಿ ರೋಹಿತ್ ಶರ್ಮಗೆ ಸ್ಥಾನ ಸಿಗುವುದು ಅನುಮಾನ ಹಾಗೂ ಅವರನ್ನು ತಂಡದಿಂದ ಹೊರಗಿಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂಬ ಸುದ್ದಿ ಬೆನ್ನಲ್ಲೇ ರೋಹಿತ್ ಶರ್ಮ ಈ ನಿರ್ಧಾರ ಪ್ರಕಟಿಸಿದ್ದಾರೆ.
38 ವರ್ಷದ ರೋಹಿತ್ ಶರ್ಮ, 67 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 12 ಶತಕ ಹಾಗೂ 18 ಅರ್ಧಶತಕ ಸೇರಿದಂತೆ 40.57ರ ಸರಾಸರಿಯಲ್ಲಿ 4301 ರನ್ ಗಳಿಸಿದ್ದಾರೆ.
ರೋಹಿತ್ ಶರ್ಮ ನಿವೃತ್ತಿ ಬೆನ್ನಲ್ಲೇ ಭಾರತ ಟೆಸ್ಟ್ ತಂಡಕ್ಕೆ ಹೊಸ ನಾಯಕನ ಆಯ್ಕೆ ನಡೆಯಲಿದ್ದು, ಜಸ್ ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ರಿಷಭ್ ಪಂತ್ ಹಾಗೂ ಶುಭಮನ್ ಗಿಲ್ ನಡುವೆ ಸ್ಪರ್ಧೆ ಏರ್ಪಡಲಿದೆ.



