Monday, June 8, 2026
Google search engine
Homeರಾಜ್ಯರೈತರನ್ನು ಮದುವೆ ಆಗುವ ಯುವತಿಯಗೆ 10 ಲಕ್ಷ ರೂ.: ರೈತ ಸಂಘಟನೆಗಳ ಮನವಿ

ರೈತರನ್ನು ಮದುವೆ ಆಗುವ ಯುವತಿಯಗೆ 10 ಲಕ್ಷ ರೂ.: ರೈತ ಸಂಘಟನೆಗಳ ಮನವಿ

ಬೆಂಗಳೂರು: ರೈತ ಯುವಕರನ್ನು ವಿವಾಹವಾಗುವ ಹೆಣ್ಣುಮಕ್ಕಳಿಗೆ ಕನಿಷ್ಠ 10 ಲಕ್ಷ ರೂ ಠೇವಣಿ ಇಡುವುದು ಸೇರಿದಂತೆ ಹಲವು ಬೇಡಿಕೆಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದೆ.

ಬಜೆಟ್ ಪೂರ್ವ ಸಿದ್ಧತೆ ಆರಂಭಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿದ ರೈತ ಸಂಘಟನೆಗಳ ಮುಖಂಡರು ಮದುವೆ ಆಗಲು ವಧು ಸಿಗದೇ ಇರುವುದು ಒಂದು ಸಾಮಾಜಿಕ ಪಿಡುಗಾಗಿದೆ. ಈ ಸಮಸ್ಯೆ ಬಗೆಹರಿಸಲು ರೈತ ಯುವಕರನ್ನು ವಿವಾಹವಾಗುವ ಹೆಣ್ಣುಮಕ್ಕಳಿಗೆ ಕನಿಷ್ಠ 10 ಲಕ್ಷ ರೂ. ಠೇವಣಿ, ಕೃಷಿ ಅಥವಾ ಕೃಷಿಪೂರಕ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಸರ್ಕಾರವೇ ಭದ್ರತೆ ನೀಡಿ ಬಡ್ಡಿರಹಿತ ಸಾಲ ಒದಗಿಸಿ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.

ರೈತರ ಮದುವೆಯಾಗುವ ಹೆಣ್ಣುಮಗಳಿಗೆ ಉದ್ಯೋಗದಲ್ಲಿ ಶೇ 20ರಷ್ಟು ಮೀಸಲಾತಿ: ರೈತರ ಮಗನನ್ನು ಮದುವೆಯಾಗುವ ಹೆಣ್ಣು ಮಗಳಿಗೆ ಸರ್ಕಾರಿ ಕೆಲಸದಲ್ಲಿ ಶೇಕಡಾ 20ರಷ್ಟು ಮೀಸಲಾತಿ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮನವಿ ಪತ್ರ ಸಲ್ಲಿದೆ.

ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ಮಾತು ಕೊಟ್ಟಂತೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಎಪಿಎಂಸಿ ಕಾಯ್ದೆಯನ್ನು ಮತ್ತಷ್ಟು ರೈತ ಸ್ನೇಹಿ ಆಗಿ ಗಟ್ಟಿಗೊಳಿಸಬೇಕು. ಬಿಜೆಪಿ ಸರ್ಕಾರ ತಂದಿರುವ ಜಾನುವಾರು ಹತ್ಯೆ ನಿಷೇದ ಮತ್ತು ಸಂರಕ್ಷಣಾ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಲಾಗಿದೆ.‌

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ಕಾಯ್ದೆ 2025, ಬೀಜ ಮಸೂದೆ 2025, ಕೃಷಿ ಉತ್ಪನ್ನಗಳ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಈ ಅಧಿವೇಶನದಲ್ಲಿ ಘೋಷಿಸಬೇಕು. ರೈತರಿಗೆ ಬೆಂಬಲ ಬೆಲೆ ಒದಗಿಸುವ ಸಲುವಾಗಿ ಕನಿಷ್ಠ 20 ಸಾವಿರ ಕೋಟಿ ಆವರ್ತ ನಿಧಿಯನ್ನು ಮೀಸಲಿಡಬೇಕು. ಸಮಗ್ರ ಪಡಿತರ ವ್ಯವಸ್ಥೆಯನ್ನು ರೂಪಿಸಿ ಭತ್ತ, ರಾಗಿ, ಜೋಳ, ತೊಗರಿಬೇಳೆ, ಎಣ್ಣೆಕಾಳು, ಸಿರಿದಾನ್ಯ ಮುಂತಾದ ಅವಶ್ಯಕ ಉತ್ಪನ್ನಗಳನ್ನು ಎಂ.ಎಸ್.ಪಿ ದರದಲ್ಲಿ ರೈತರಿಂದಲೇ ನೇರವಾಗಿ ಕೊಳ್ಳುವ ವ್ಯವಸ್ಥೆಯನ್ನು ರೂಪಿಸಬೇಕು.

ಬಗರ್ ಹುಕುಂ ಸಾಗುವಳಿದಾರರಿಗೆ ದರಖಾಸ್ತು ಮಂಜೂರು ಮಾಡಲು ತೊಡಕಾಗಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಲು ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಹಕ್ಕುಪತ್ರ ನೀಡಲು ಘೋಷಿಸಬೇಕು. ಕರ್ನಾಟಕದ ಕೃಷಿಯ ಹೆಚ್ಚು ಭೂಮಿ ಮರಳು ಭೂಮಿಯಾಗಿ ಪರಿವರ್ತನೆ ಆಗುತ್ತಿರುವುದು ತುಂಬಾ ಆತಂಕಕಾರಿಯಾಗಿದೆ. ಇದನ್ನು ತಡೆಗಟ್ಟಲು ವಿಶೇಷ ಕಾಳಜಿಯ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ಆಗ್ರಹಿಸಿಸಿದ್ದಾರೆ.

ಕಿಸಾನ್ ಸಮ್ಮಾನ್ ಯೋಜನೆ ಮರುಜಾರಿ ಮಾಡಿ

ಕಿಸಾನ್ ಸಮ್ಮಾನ್ ಯೋಜನೆ ಪುನಃ ಜಾರಿಗೆ ತಂದು ರೈತರಿಗೆ ಹತ್ತು ಸಾವಿರ ಧನ ಸಹಾಯ ನೀಡುವಂತೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಮನವಿ ಮಾಡಿದ್ದಾರೆ.

ಕಬ್ಬಿನ ಬೆಲೆ ನಿಗದಿ ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು. ಕಟಾವು ಸಾಗಾಣಿಕೆ ಕಾರ್ಖಾನೆಗಳು ಭರಿಸುವಂತಾಗಬೇಕು. ರಾಜ್ಯಾದ್ಯಂತ ಎಲ್ಲಾ ಕೆರೆಗಳ ಹೂಳು ತೆಗೆಸಿ ರೈತರ ಜಮೀನಿಗೆ ಸಾಗಿಸುವುದು. ಎಪಿಎಂಸಿ ಗಳಲ್ಲಿ ರೈತರ ಉತ್ಪನ್ನಗಳ ಅಡಮಾನ ಸಾಲ ನೀಡುವ ಯೋಜನೆಗೆ ಹೆಚ್ಚು ಹಣಕಾಸು ನೀಡಿ ಸದೃಢಗೊಳಿಸುವುದು. ಕಳಪೆ ಕೀಟನಾಶಕ .ಬೀಜ ನಕಲಿ ಗೊಬ್ಬರ. ನರ್ಸರಿ ಸಸಿಗಳು ಮಾರಾಟ ಮಾಡುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.

ರೈತರ ಎಲ್ಲಾ ಬೆಳೆಗಳಿಗೂ ಬೆಳೆವಿಮೆ ಜಾರಿಗೆ ತರಬೇಕು ಅತಿವೃಷ್ಟಿ, ಮಳೆ ಹಾನಿ, ಅನಾವೃಷ್ಟಿ, ಪ್ರಕೃತಿ ವಿಕೋಪ ಬೆಳೆ ನಷ್ಟಕ್ಕೆ ವಿಮಾ ಪರಿಹಾರ ಸಿಗುವಂತಾಗಬೇಕು. ಬ್ಯಾಂಕುಗಳಲ್ಲಿ ಕೃಷಿ ಸಾಲ ನೀತಿ ಬದಲಾಗಬೇಕು ರೈತರ ಭೂಮಿಯ ಮೌಲ್ಯಕ್ಕೆ 75 ರಷ್ಟು ಸಾಲ ನೀಡುವ ಯೋಜನೆ ಜಾರಿಗೆ ತರಬೇಕು. ಕಬ್ಬಿನ ಅಲ್ಪಾವಧಿ ಬೆಳೆ ಸಾಲ 18 ತಿಂಗಳಿಗೆ ವಿಸ್ತರಣೆ ಮಾಡಬೇಕು. ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಪರೀಕ್ಷೆ ಮಾಡಲು ಪರಿಣಿತ ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಬೇಕು. ಕಬ್ಬಿಗೆ ಹೆಚ್ಚುವರಿ ದರ ನೂರು ರೂ ನಿಗದಿ ಮಾಡಿರುವ ಬಾಪ್ತು ಸರ್ಕಾರದ 50 ರೂ ಕೂಡಲೇ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments