ಬೆಂಗಳೂರು: ಬಿಜೆಪಿ ಕಚೇರಿ ಮುಂದೆ ಅಥವಾ ಆರ್.ಅಶೋಕ್, ವಿಜಯೇಂದ್ರ ಮನೆ ಮುಂದೆ ಕಸ ಸುರಿಯಬೇಕಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಗೌರವದಿಂದ ಇದ್ದರೆ ಸರಿ. ಈ ರೀತಿ ಬ್ಲಾಕ್ ಮೇಲ್ ಮಾಡಿದರೆ ಎಸ್ಮಾ ಜಾರಿ ಮೂಲಕ ಬಿಜೆಪಿಯವರ ಮನೆ ಮುಂದೆಯೇ ಕಸ ಸುರಿಯಬೇಕಾಗುತ್ತದೆ ಎಂದರು.
ತಮ್ಮ ಕ್ಷೇತ್ರಗಳಿಗೆ ಅನುದಾನಕ್ಕಾಗಿ ಬಿಜೆಪಿಯ ಎಲ್ಲಾ ಶಾಸಕರು ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ. ಗೌರವದಿಂದ ನಡೆದುಕೊಂಡಿಲ್ಲ ಅಂದ್ರೆ ಎಸ್ಮಾ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಶೋಕ್, ವಿಜಯೇಂದ್ರ ಮನೆ ಮುಂದೆಯೇ ಕಸ ಹಾಕಿಸಬೇಕಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಅರವಿಂದ್ ಲಿಂಬಾವಳಿ, ದೊಡ್ಡಬಳ್ಳಾಪುರದಲ್ಲಿ ಶಾಸಕರು ಕಸದ ಲಾರಿ ತಡೆಹಿಡಿದಿದ್ದಾರೆ. ಇದು ಸರಿಯಲ್ಲ. ಕಸ ಒಂದು ಕಡೆ ಹಾಕಬೇಕಲ್ವಾ? ನಗರದ ಹೊರವಲಯದಲ್ಲಿ ಹಾಕಿದರೆ ಇವರಿಗೆ ಏನು ಸಮಸ್ಯೆ? ಅಲ್ಲೂ ಬೇಡ, ಇಲ್ಲೂ ಬೇಡ ಅಂದರೆ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಕಸ ಅಶೋಕ್ ಮನೆಗೆ, ವಿಜಯೇಂದ್ರ ಮನೆಗೆ ಅಥವಾ ಬಿಜೆಪಿ ಆಫೀಸಿಗೆ ಹೋಗಬೇಕು. ನಿನ್ನೆ ಲಿಂಬಾವಳಿ ಪ್ರತಿಭಟನೆ ಮಾಡಿದ್ದಾರೆ, ಇವತ್ತು ದೊಡ್ಡಬಳ್ಳಾಪುರ ಎಂಎಲ್‌ಎ ಮಾಡಿದ್ದಾರೆ. ತಮ್ಮ ಕ್ಷೇತ್ರಕ್ಕೆ ಅನುದಾನ ಬೇಕು ಎಂದು ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ. ಸುಮ್ಮನೆ ಇರಲಿಲ್ಲ ಅಂದರೆ ಅಶೋಕ್, ವಿಜಯೇಂದ್ರ ಮನೆ ಮುಂದೆನೇ ಕಸ ಹಾಕಿಸ್ತೇನೆ ಅಥವಾ ಬಿಜೆಪಿ ಕಚೇರಿ ಮುಂದೆಯೇ ಕಸ ಹಾಕಿಸ್ತೇನೆ ಎಂದರು. ದೊಡ್ಡಬಳ್ಳಾಪುರದಲ್ಲಿ ಅಪಘಾತ ಆಗಬಾರದಿತ್ತು, ಆದರೆ ಆಗಿ ಹೋಗಿದೆ. ಅದಕ್ಕೆ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.



