ಅಮೆರಿಕವು ತನ್ನ ಸೇನೆಯನ್ನು ಉಕ್ರೇನ್ ನೆರವಿಗೆ ಕಳುಹಿಸಿದರೆ ಅಣು ಸಮರ ಸಾರಲು ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಾರ್ಚ್ 15ರಿಂದ 17ರವರೆಗೆ ರಷ್ಯಾದಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ವ್ಲಾದಿಮಿರ್ ಪುಟಿನ್ ಗೆಲುವು ಸಾಧಿಸಿದರೆ ಮುಂದಿನ 5 ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಪುಟಿನ್ ಈ ಎಚ್ಚರಿಕೆ ನೀಡಿರುವುದು ಮಹತ್ವ ಪಡೆದಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿ ಎರಡು ವರ್ಷ ಕಳೆದಿವೆ. ಉಕ್ರೇನ್ ನ ಹಲವು ನಗರಗಳನ್ನು ವಶಪಡಿಸಿಕೊಂಡಿದ್ದೂ ಇನ್ನೂ ಪೂರ್ಣ ಜಯ ಸಾಧ್ಯವಾಗಿಲ್ಲ. ಶಕ್ತಿ ಕುಂದಿರುವ ಉಕ್ರೇನ್ ಗೆ ಅಮೆರಿಕ ಸೇನಾ ನೆರವು ನೀಡುವುದಾಗಿ ಘೋಷಿಸಿದೆ.
ಅಮೆರಿಕ ತನ್ನ ಸೇನೆಯನ್ನು ಉಕ್ರೇನ್ ಗೆ ಕಳುಹಿಸಿದರೆ ನಾವು ನ್ಯೂಕ್ಲಿಯರ್ ಬಾಂಬ್ ದಾಳಿ ನಡೆಸಲು ಹಿಂದೇಟು ಹಾಕುವುದಿಲ್ಲ. ನಾವು ನ್ಯೂಕ್ಲಿಯರ್ ದಾಳಿಗೆ ಸಿದ್ಧವಾಗಿದ್ದೇವೆ ಎಂದು 71 ವರ್ಷದ ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ ಅಥವಾ ರಷ್ಯಾದ ಗಡಿಯೊಳಗೆ ಅಮೆರಿಕ ಸೇನೆ ಪ್ರವೇಶಿಸಿದರೆ ನಾವು ಅಕ್ರಮ ವಲಸೆ ಎಂದು ಪರಿಗಣಿಸುತ್ತೇವೆ. ಯುದ್ಧದ ಬಗ್ಗೆ ತಾಂತ್ರಿಕವಾಗಿ ಹೇಳಬೇಕೆಂದರೆ ನಾವು ಅಣು ದಾಳಿ ನಡೆಸಲು ಕೂಡ ಸಜ್ಜಾಗಿದ್ದೇವೆ. ಅಮೆರಿಕ ದಾಳಿಯನ್ನೂ ಹತ್ತಿಕ್ಕುವ ಸಾಮರ್ಥ್ಯ ಹೊಂದಿರುವ ತಜ್ಞರು ಹಾಗೂ ವಿಜ್ಞಾನಿಗಳನ್ನು ಹೊಂದಿದ್ದೇವೆ ಎಂದು ಪುಟಿನ್ ವಿವರಿಸಿದ್ದಾರೆ.