ಕಾರವಾರ ಜಿಲ್ಲೆಯ ಗೋಕರ್ಣದ ರಾಮತೀರ್ಥ ಗುಹೆಯಲ್ಲಿ ವಾಸವಿದ್ದ ರಷ್ಯಾದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಸ್ಥಳೀಯ ಪೊಲೀಸರು ರಕ್ಷಿಸಿದ್ದು, ಸ್ವದೇಶಕ್ಕೆ ಕಳುಹಿಸುವ ಸಿದ್ಧತೆ ನಡೆಸಿದ್ದಾರೆ.
ಗೋಕರ್ಣದ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಗುಹೆಯಲ್ಲಿ ಸುಮಾರು 40 ವರ್ಷದ ರಷ್ಯಾದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದನ್ನು ಪತ್ತೆ ಹಚ್ಚಿದ್ದು, ಇದು ಅಪಾಯಕಾರಿ ಸ್ಥಳವಾಗಿದ್ದು, ವಾಸ ಯೋಗ್ಯವಲ್ಲ ಎಂದು ಮನವರಿಕೆ ಮಾಡಿ ಸುರಕ್ಷಿತವಾಗಿ ಕರೆ ತಂದಿದ್ದು, ರಷ್ಯಾಗೆ ವಾಪಸ್ ಕಳುಹಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣೆಯ ನಿರೀಕ್ಷಕ ಶ್ರೀಧರ್ ಎಸ್.ಆರ್ ಮತ್ತು ಅವರ ತಂಡ ರಾಮತೀರ್ಥ ಗುಡ್ಡದ ಅರಣ್ಯ ಪ್ರದೇಶದಲ್ಲಿ ಗಸ್ತು ದಡ್ಡ ಕಾಡಿನೊಳಗೆ 40 ವರ್ಷದ ರಷ್ಯಾ ಮೂಲದ ನಿನಾ ಕುಟಿನಾ, 6 ವರ್ಷ ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಗುಹೆಯಲ್ಲಿ ವಾಸಿಸುತ್ತಿರುವುದು ಪತ್ತೆ ಹಚ್ಚಿದ್ದಾರೆ.
ನಿನಾ ಕುಟಿನಾ ದೇವರ ಪೂಜೆ ಮತ್ತು ಧ್ಯಾನಕ್ಕಾಗಿ ಗೋವಾದಿಂದ ಮಕ್ಕಳೊಂದಿಗೆ ಗೋಕರ್ಣಗೆ ಆಗಮಿಸಿದ್ದು, ಇಲ್ಲಿಯೇ ವಾಸವಾಗಿರುವುದಾಗಿ ತಿಳಿಸಿದ್ದಾರೆ.
ರಾಮತೀರ್ಥ ಗುಡ್ಡದಲ್ಲಿ ಈ ಹಿಂದೆ ಗುಡ್ಡ ಕುಸಿತ ಸಂಭವಿಸಿದ್ದರಿಂದ ಇದು ಅಪಾಯಕಾರಿ ಪ್ರದೇಶವಾಗಿದೆ. ಅಲ್ಲದೇ, ಹಾವುಗಳು ಸೇರಿದಂತೆ ವಿಷಕಾರಿ ಜಂತುಗಳ ವಾಸವಿರುವ ಕಾರಣ ಅಲ್ಲಿ ವಾಸಿಸುವುದು ಅಪಾಯಕಾರಿ ಎಂದು ಮಹಿಳೆಗೆ ಮನವರಿಕೆ ಮಾಡಿಕೊಟ್ಟು ಸುರಕ್ಷಿತವಾಗಿ ಗುಹೆಯಿಂದ ಕೆಳಗೆ ಕರೆತಂದಿದ್ದಾರೆ.
ಕುಮಟಾ ತಾಲೂಕಿನ ಬಂಕಿಕೋಡ್ಲು ಗ್ರಾಮದಲ್ಲಿರುವ ಶಂಕರ ಪ್ರಸಾದ ಫೌಂಡೇಶನ್ ಎಂಬ ಎನ್‌ಜಿಒ ಸಂಸ್ಥೆಯ ಯೋಗರತ್ನ ಸರಸ್ವತಿ ಸ್ವಾಮೀಜಿಯ ಆಶ್ರಮಕ್ಕೆ ಮಹಿಳಾ ಪೊಲೀಸ್ ಸಿಬ್ಬಂದಿಯ ರಕ್ಷಣೆಯಲ್ಲಿ ಕರೆದೊಯ್ದಿದ್ದಾರೆ.
ವೀಸಾ ಅವಧಿ ಮುಕ್ತಾಯ, ರಷ್ಯಾಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ: ಆಧ್ಯಾತ್ಮಿಕತೆಯ ಅಭಿಮಾನಿಯಾಗಿರುವ ಈ ವಿದೇಶಿ ಮಹಿಳೆ ಭಾರತದಲ್ಲೇ ಉಳಿಯುವ ಉದ್ದೇಶದಿಂದ ಪಾಸ್‌ಪೋರ್ಟ್ ಮತ್ತು ವೀಸಾ ವಿವರಗಳನ್ನು ನೀಡಲು ಆರಂಭದಲ್ಲಿ ನಿರಾಕರಿಸಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗಳು, ಯೋಗರತ್ನ ಸರಸ್ವತಿ ಸ್ವಾಮೀಜಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ಸಮಾಲೋಚನೆ ನಡೆಸಿ ಪಾಸ್‌ಪೋರ್ಟ್ ಮತ್ತು ವೀಸಾ ಕಾಡಿನಲ್ಲಿ ಅಥವಾ ಗುಹೆಯಲ್ಲೇ ಬಿದ್ದಿರಬಹುದು ಶಂಕಿಸಿದ್ದಾರೆ.
ಗೋಕರ್ಣ ಪೊಲೀಸರು ಅರಣ್ಯ ಇಲಾಖೆಯ ಸಿಬ್ಬಂದಿ ಗುಹೆ ಸುತ್ತಮುತ್ತ ವಿದೇಶಿ ಮಹಿಳೆಯ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಪತ್ತೆಹಚ್ಚಿದ್ದಾರೆ. ಪರಿಶೀಲನೆ ನಡೆಸಿದಾಗ, ವೀಸಾ ಅವಧಿ 17-04-2017 ರಂದು ಮುಕ್ತಾಯ ಆಗಿರುವುದು ತಿಳಿದು ಬಂದಿದೆ.
ವೀಸಾ ಅವಧಿ ಮೀರಿದ ಈ ರಷ್ಯಾ ಮೂಲದ ಮಹಿಳೆ ಮತ್ತು ಮಕ್ಕಳನ್ನು ಮರಳಿ ರಷ್ಯಾಕ್ಕೆ ಕಳುಹಿಸುವ ಕ್ರಮ ಕೈಗೊಳ್ಳಲಾಗಿದೆ. ಜುಲೈ 14 ರಂದು ಮಹಿಳೆ ಮತ್ತು ಮಕ್ಕಳನ್ನು ಮಹಿಳಾ ಪೊಲೀಸ್ ಸಿಬ್ಬಂದಿಯ ರಕ್ಷಣೆಯಲ್ಲಿ ಬೆಂಗಳೂರು ಶಾಂತಿನಗರದಲ್ಲಿರುವ ಎಫ್‌ಆರ್‌ಆರ್‌ಒ ಕಚೇರಿಗೆ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



