ಭಾರತ ತಂಡದಿಂದ ಕಡೆಗಣಿಸಲ್ಪಟ್ಟಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ 75 ಎಸೆತಗಳಲ್ಲಿ ಸಿಡಿಸಿದ 157 ರನ್ ನೆರವಿನಿಂದ ಮುಂಬೈ ತಂಡ 87 ರನ್ ಗಳಿಂದ ಗೋವಾ ತಂಡವನ್ನು ಮಣಿಸಿದೆ.
ಜೈಪುರದಲ್ಲಿ ಬುಧವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 444 ರನ್ ಸಂಪಾದಿಸಿದೆ. ಕಠಿಣ ಗುರಿ ಬೆಂಬತ್ತಿದ ಗೋವಾ ತಂಡ 50 ಓವರ್ ಗಳಲ್ಲಿ 9 ವಿಕೆಟ್ ಗೆ 357 ರನ್ ಗಳಿಸಲಷ್ಟೇ ಶಕ್ತವಾಯಿತು.
ಗೋವಾ ತಂಡ ಒಂದು ಹಂತದಲ್ಲಿ 110 ರನ್ ಗೆ 4 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಆದರೆ ಕೆಳ ಕ್ರಮಾಂಕದಲ್ಲಿ ಅಭಿನವ್ ತೆಜ್ರಾನಾ 70 ಎಸೆತಗಳಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್ ಸಹಾಯದಿಂದ 100 ರನ್ ಗಳಿಸಿ ಹೋರಾಟ ನಡೆಸಿದರು.
ಅಭಿನವ್ ಗೆ ಉತ್ತಮ ಬೆಂಬಲ ನೀಡಿದ ನಾಯಕ ದೀಪ್ ರಾಜ್ ಗೋಯೆಂಕಾ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡ 70 ರನ್ ಬಾರಿಸಿದರೆ, ಲಲಿತ್ ಯಾದವ್ 66 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 64 ರನ್ ಗಳಿಸಿ ತಂಡದ ಹೀನಾಯ ಸೋಲು ತಪ್ಪಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಮುಂಬೈ ತಂಡ ಸರ್ಫರಾಜ್ ಖಾನ್ ಸಿಡಿಲಬ್ಬರದ ಬ್ಯಾಟಿಂಗ್ ನಿಂದ ಬೃಹತ್ ಮೊತ್ತ ಕಲೆ ಹಾಕಿತು. ಸರ್ಫರಾಜ್ ಖಾನ್ 75 ಎಸೆತಗಳಲ್ಲಿ 9 ಬೌಂಡರಿ ಮತ್ತು 14 ಸಿಕ್ಸರ್ ಸಹಾಯದಿಂದ 157 ರನ್ ಚಚ್ಚಿದರು.
ಯಶಸ್ವಿ ಜೈಸ್ವಾಲ್ (46), ಮುಶೀರ್ ಖಾನ್ (60), ಹಾರ್ದಿಕ್ ಥೋಮರ್ (53) ಉತ್ತಮ ಮೊತ್ತ ಕಲೆ ಹಾಕಿ ತಂಡವನ್ನು ಆಧರಿಸಿದರು.



