ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಬೆಳ್ತಂಗಡಿಯ ಉಜಿರೆಯಲ್ಲಿರುವ ನಿವಾಸಕ್ಕೆ ಮಂಗಳವಾರ ಮುಂಜಾನೆ ದಾಳಿ ನಡೆಸಿದ ಎಸ್ ಐಟಿ ಪೊಲೀಸರು ಸಿಸಿಟಿವಿ, ಹಾರ್ಡ್ ಡಿಸ್ಕ್ ಹಾಗೂ ದೂರುದಾರ ಚೆನ್ನಯ್ಯ ಬಳಸುತ್ತಿದ್ದ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ದೂರು ನೀಡಿದ್ದ ಚೆನ್ನಯ್ಯ ನನ್ನು ಈಗಾಗಲೇ ಬಂಧಿಸಿರುವ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದರು.
ಎಸ್‌ಐಟಿ ಉತ್ಕನನ ನಡೆಸಿದ ಬಳಿಕ ತಾನು ತಿಮರೋಡಿ ನಿವಾಸಕ್ಕೆ ಹೋಗುತ್ತಿದ್ದೆ. ಅಲ್ಲಿ ನನಗೆ ಒಂದು ಕೊಠಡಿಯನ್ನು ನೀಡಲಾಗಿತ್ತು. ಅಲ್ಲಿ ನಾನು ಬಟ್ಟೆ, ಬ್ಯಾಗ್ ಇಟ್ಟಿದ್ದೇನೆ. ನಾನು ಮೊಬೈಲ್ ಬಳಸುತ್ತಿರಲಿಲ್ಲ. ನನ್ನ ಮೊಬೈಲ್ ತಿಮರೋಡಿ ಕಡೆಯವರ ಜೊತೆ ಇತ್ತು ಎಂದು ಚಿನ್ನಯ್ಯ ನೀಡಿದ ಹೇಳಿಕೆ ಆಧರಿಸಿ ಮಹೇಶ್ ತಿಮರೋಡಿ ಅವರ ನಿವಾಸದ ಮೇಲೆ ದಾಳಿ ಮಾಡಿದ ಪೊಲೀಸರು ಮೊಬೈಲ್ ಮತ್ತು ಬಟ್ಟೆಗಳನ್ನು ವಶಕ್ಕೆ ಪಡೆದಿದ್ದಾರೆ.
ಧರ್ಮಸ್ಥಳದಲ್ಲಿ ಶೋಧ ನಡೆಯುತ್ತಿದ್ದಾಗ ಪ್ರಕರಣದ ಎಲ್ಲಾ ಆರೋಪಿಗಳು ತಿಮರೋಡಿ ಮನೆಯಲ್ಲೇ ತಂಗಿದ್ದರು. ಇದರಲ್ಲಿ ದೂರುದಾರ ಚೆನ್ನಯ್ಯ, ಯೂಟ್ಯೂಬರ್ ಸಮೀರ್, ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಮುಂತಾದವರು ತಂಗಿದ್ದು, ಎಲ್ಲಾ ಯೋಜನೆಗಳು ಇಲ್ಲಿಯೇ ಸಿದ್ಧವಾಗುತ್ತಿತ್ತು ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ತಿಮರೋಡಿ ಮನೆಗೆ ಯಾರೆಲ್ಲ ಬಂದಿದ್ದರು? ಏನೆಲ್ಲಾ ಚರ್ಚೆಗಳು ಆಗುತ್ತಿದ್ದವು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಸಿಸಿಟಿವಿ ಹಾಗೂ ಹಾರ್ಡ್ ಡಿಸ್ಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ತಿಮರೋಡಿ ಮನೆಯ ಕೊಠಡಿಯಲ್ಲಿ ಚಿನ್ನಯ್ಯ ಕೆಲ ರಾಷ್ಟ್ರೀಯ ಮಾಧ್ಯಮ ಮತ್ತು ಯೂಟ್ಯೂಬ್ ವಾಹಿನಿಗಳಿಗೆ ಸಂದರ್ಶನ ನೀಡಿದ್ದ. ಈ ಸಂದರ್ಶನದ ವಿಡಿಯೋಗಳು ಕೆಲ ದಿನಗಳಿಂದ ಪ್ರಸಾರವಾಗುತ್ತಿದೆ. ಹೀಗಾಗಿ ಸಂದರ್ಶನ ನೀಡಿದ ಜಾಗಗಳ ಮಹಜರು ಪ್ರಕ್ರಿಯೆಯನ್ನು ಎಸ್‌ಐಟಿ ಪೊಲೀಸರು ನಡೆಸಿದ್ದಾರೆ.
ಸಿಸಿಟಿವಿ ಡಿವಿಆರ್‌ಗಳನ್ನು ಪೊಲೀಸರು ಪಡೆದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತಿಮರೋಡಿ ನಿವಾಸಕ್ಕೆ ಆಗಮಿಸಿದ್ದ ವ್ಯಕ್ತಿಗಳ ವಿಚಾರಣೆಯನ್ನು ಪೊಲೀಸರು ನಡೆಸುವ ಸಾಧ್ಯತೆಯಿದೆ. ಇವರುಗಳನ್ನು ಪ್ರಕರಣದ ಸಾಕ್ಷಿಗಳಾಗುವ ಸಾಧ್ಯತೆಯಿದೆ.
ತಮ್ಮ ಪರವಾಗಿ ಸುದ್ದಿಗಳನ್ನು ಪ್ರಚಾರ ಮಾಡಲು ಕೆಲ ಯೂಟ್ಯೂಬರ್‌ಗಳಿಗೆ ಬುರುಡೆ ಗ್ಯಾಂಗ್ ಪ್ರೋತ್ಸಾಹ ನೀಡುತ್ತಿತ್ತು. ಐದಕ್ಕೂ ಹೆಚ್ಚು ಯೂಟ್ಯೂಬರ್‌ಗಳು ತಿಮರೋಡಿ ನಿವಾಸದಲ್ಲಿ ತಂಗಿದ್ದರು. ಈ ಯೂಟ್ಯೂಬರ್‌ಗಳನ್ನು ಪೊಲೀಸರು ತನಿಖೆಗೆ ಒಳಪಡಿಸುವ ಸಾಧ್ಯತೆಯಿದೆ.
ದಾಳಿ ನಡೆಯುವ ಬಗ್ಗೆ ಖಚಿತ ಮಾಹಿತಿ ಇದ್ದ ಕಾರಣ ಪೊಲೀಸ್ ವಾಹನಗಳ ಜೊತೆ ಇಂದು ಬೆಳಗ್ಗೆ ಮಾಧ್ಯಮಗಳ ವಾಹನಗಳು ತಿಮರೋಡಿಗೆ ತೆರಳಿತ್ತು. ಆದರೆ ಪೊಲೀಸರು ತಿಮರೋಡಿಗೆ ಹೋಗುವ ಮಾರ್ಗ ಮಧ್ಯೆಯೇ ಎಲ್ಲಾ ಮಾಧ್ಯಮಗಳ ವಾಹನಗಳನ್ನು ತಡೆದು ನಿಲ್ಲಿಸಿದ್ದರು.



