ತಂದೆ ದಾನ ಮಾಡಿದ್ದ ಜಾಗದಲ್ಲಿ ನಿರ್ಮಾಣವಾಗಿದ್ದ ಆಸ್ಪತ್ರೆಯಲ್ಲಿ ಸೂಕ್ತ ಸಮಯದಲ್ಲಿ ಆಂಬುಲೆನ್ಸ್ ಸಿಗದೇ ಮಗ ಮೃತಪಟ್ಟ ಹೃದಯವಿದ್ರಾವಕ ಘಟನೆ ತುಮಕೂರಿನ ಪಾವಗಡದಲ್ಲಿ ಸಂಭವಿಸಿದೆ.
ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ನಡೆದಿದ್ದು, ಸೈಯ್ಯದ್ ಅಕ್ರಂ (42) ಮೃತ ದುರ್ದೈವಿ.
ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದು, ನಮಗಾದ ತೊಂದರೆ ಮತ್ಯಾರಿಗೂ ಆಗಬಾರದು ಎಂದು ಅಲವತ್ತುಕೊಂಡಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸೈಯ್ಯದ್ ಅಕ್ರಂ ಅವರನ್ನು ಸೋದರ ನಯಾಜ್ ಜ.16ರಂದು ಸಮುದಾಯದ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಪರೀಕ್ಷೆ ನಡೆಸಿದ ವೈದ್ಯರು ರೋಗಿಯ ಬಿಪಿ ಕಡಿಮೆಯಾಗಿದೆ ಎಂದಿದ್ದು, ಹೆಚ್ಚಿನ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ.
ರೋಗಿಯ ಸ್ಥಳಾಂತರಕ್ಕೆ ಸುಮಾರು 1 ಗಂಟೆ ಕಾದರೂ ಆ್ಯಂಬುಲೆನ್ಸ್ ಬರಲಿಲ್ಲ. ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಇದ್ದರೂ ಚಾಲಕನಿಲ್ಲ ಎನ್ನಲಾಗಿದೆ. ಹೀಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ತಮ್ಮ ಸಹೋದರ ತಪಟ್ಟಿದ್ದಾನೆ ಎಂಬುದು ನಯಾಜ್ ಆರೋಪಿಸಿದೆ.
ಒಂದೂವರೆ ಎಕರೆ ಜಮೀನು ನೀಡಿದ್ದ ಸೈಯದ್ ತಂದೆ
ಈ ಆಸ್ಪತ್ರೆಯ ನಿರ್ಮಾಣಕ್ಕೆ ಭೂಮಿ ದಾನ ಮಾಡಿದಿದ್ದು ಮೃತ ಸೈಯ್ಯದ್ ತಂದೆ. ಜನರ ಜೀವ ಉಳಿಸಲು ಆಸ್ಪತ್ರೆಯ ಅಗತ್ಯ ಮನಗಂಡಿದ್ದ ಅವರು, ಕೋಟ್ಯಂತರ ಮೌಲ್ಯದ ಒಂದೂವರೆ ಎಕರೆ ಭೂಮಿಯನ್ನು ನೀಡಿದ್ದರು.
ದುರ್ದೈವ ಎಂಬಂತೆ ಅದೇ ಜಾಗದಲ್ಲೀಗ ಅವರ ಮಗ ಸರಿಯಾಗಿ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡಿದ್ದಾರೆ. ನನ್ನ ಸಹೋದರನಿಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು. ಆಸ್ಪತ್ರೆಗೆ ಕೂಡಲೇ ಅಗತ್ಯ ತಜ್ಞ ವೈದ್ಯರು, ಸಿಬ್ಬಂದಿ ಮತ್ತು ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಮಾಡುವ ಮೂಲಕ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ನಯಾಜ್ ಕಣ್ಣೀರು ಹಾಕಿದ್ದಾರೆ.



