ವೈಭವ್ ಸೂರ್ಯವಂಶಿ ಮತ್ತು ಧ್ರುವ ಜುರೆಲ್ ಅವರ ಸಿಡಿಲಬ್ಬರದ ಆಟದಿಂದ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ ಗಳಿಂದ ಜಯಭೇರಿ ಬಾರಿಸಿದೆ. ಈ ಮೂಲಕ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2026ನಲ್ಲಿ ಮೊದಲ ಬಾರಿ ಸೋಲು ಅನುಭವಿಸಿದೆ.
ಗುವಾಹತಿಯಲ್ಲಿ ಶನಿವಾರ ನಡೆದ ಪಂದ್ಯ ಮಳೆಯಿಂದ ತಡವಾಗಿ ಆರಂಭಗೊಂಡರೂ ಪೂರ್ಣ 20 ಓವರ್ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ತಂಡ ನಿಯಮಿತವಾಗಿ ವಿಕೆಟ್ ಕಳೆದುಕೊಂಡರೂ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು.
ಕಠಿಣ ಗುರಿ ಬೆಂಬತ್ತಿದ ರಾಜಸ್ಥಾನ್ ರಾಯಲ್ಸ್ 2 ಓವರ್ ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ಆಡಿದ 4 ಪಂದ್ಯಗಳಲ್ಲಿ ಗೆದ್ದು ಅಗ್ರಸ್ಥಾನಕ್ಕೇರಿದೆ. ಮೊದಲ ಬಾರಿ ಸೋಲಿನ ರುಚಿ ಅನುಭವಿಸಿದ ಆರ್ ಸಿಬಿ ಮೂರನೇ ಸ್ಥಾನಕ್ಕೆ ಕುಸಿದಿದೆ.
ರಾಜಸ್ಥಾನ್ ರಾಯಲ್ಸ್ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ (13) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಮತ್ತು ಧ್ರುವ ಜುರೆಲ್ ಎರಡನೇ ವಿಕೆಟ್ ಗೆ 6 ಓವರ್ ಗಳಲ್ಲಿ 108 ರನ್ ಸ್ಫೋಟಕ ಜೊತೆಯಾಟ ನಿಭಾಯಿಸಿದರು.
15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್ 26 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡ 78 ರನ್ ಸಿಡಿಸಿದರೆ, ಧ್ರುವ ಜುರೆಲ್ 43 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ ಅಜೇಯ 81 ರನ್ ಚಚ್ಚಿದರು.
ಚೆನ್ನೈ ಸೂಪರ್ ಕಿಂಗ್ಸ್ ತೊರೆದು ರಾಜಸ್ಥಾನ್ ಸೇರಿದ ರವೀಂದ್ರ ಜಡೇಜಾ 25 ಎಸೆತಗಳಲ್ಲಿ 1 ಬೌಂಡರಿ ಒಳಗೊಂಡ ಅಜೇಯ 24 ರನ್ ಗಳಿಸಿದರು. ಆರ್ ಸಿಬಿ ಪರ ಕೃನಾಲ್ ಪಾಂಡ್ಯ 2 ವಿಕೆಟ್ ಪಡೆದು ಗಮನ ಸೆಳೆದರು.


