Friday, April 17, 2026
Google search engine
Homeಕ್ರೀಡೆIPL 2026: ಐಪಿಎಲ್ ನಲ್ಲಿ 200 ಮಾಮೂಲಿ: 50 ಗಳಿಸುವುದು ಸಲೀಸು!

IPL 2026: ಐಪಿಎಲ್ ನಲ್ಲಿ 200 ಮಾಮೂಲಿ: 50 ಗಳಿಸುವುದು ಸಲೀಸು!

ಬ್ಯಾಟ್ಸ್ ಮನ್ ಗಳು ಅರ್ಧಶತಕ ಗಳಿಸುವುದು ಸಲೀಸಾಗಿದೆ. ತಂಡಗಳು 200 ರನ್ ಗಳಿಸುವುದು ಮಾಮೂಲಿ ಆಗಿದ್ದು, ದೊಡ್ಡ ಮೊತ್ತದ ಚೇಸಿಂಗ್ ಕೂಡ ಕಷ್ಟವಿಲ್ಲದೇ ಮಾಡಬಹುದಾಗಿದೆ.

ಇದು ಐಪಿಎಲ್ ಟಿ-20 ಟೂರ್ನಿಯ 2026ನೇ ಆವೃತ್ತಿ ಆರಂಭಗೊಂಡು ಎಲ್ಲಾ 10 ತಂಡಗಳು ತಲಾ 4 ಪಂದ್ಯಗಳನ್ನು ಮುಗಿದ ನಂತರ ಕಂಡು ಬಂದ ಅಂಕಿ-ಅಂಶದ ದಾಖಲೆಗಳು!

ಹೌದು, ಈ ಬಾರಿ ಬಹುತೇಕ ಎಲ್ಲಾ ಕ್ರೀಡಾಂಗಣಗಳು ಬ್ಯಾಟಿಂಗ್ ಪಿಚ್ ಆಗಿ ಬದಲಾಗಿರುವುದರಿಂದ ಬ್ಯಾಟ್ಸ್ ಮನ್ ಗಳು ರನ್ ಗಳಿಸುವುದು ಸುಲಭವಾಗಿದ್ದು, ರನ್ ಹೊಳೆ ಹರಿಸುತ್ತಿದ್ದಾರೆ. 160-180 ರನ್ ಗಳಿಸಿದರೆ ಚೇಸಿಂಗ್ ಮಾಡುವುದು ಕಷ್ಟ ಎಂಬ ಸ್ಥಿತಿ ಈಗ ಇಲ್ಲ. ಈ ಬಾರಿ ತಂಡಗಳು ಸುಲಭವಾಗಿ 200ಕ್ಕಿಂತ ಅಧಿಕ ಮೊತ್ತ ಗಳಿಸುತ್ತಿವೆ. ಅಂದರೆ ಪ್ರತೀ ಓವರ್ ಗೆ ತಂಡಗಳು 12ಕ್ಕಿಂತ ಅಧಿಕ ಸರಾರಿಯಲ್ಲಿ ರನ್ ಗಳಿಸುತ್ತಿವೆ.

ಇನ್ನೂ ವಿಶೇಷ ಅಂದರೆ ಪವರ್ ಪ್ಲೇಗಳಲ್ಲಿಯೇ ತಂಡಗಳು 80-90ರ ಆಸುಪಾಸಿನಲ್ಲಿ ರನ್ ಸಿಡಿಸುತ್ತಿವೆ. ಬ್ಯಾಟ್ಸ್ ಮನ್ ಗಳಿಗೆ ಬೌಂಡರಿ- ಸಿಕ್ಸರ್ ಸಿಡಿಸುವುದು ನೀರು ಕುಡಿದಷ್ಟೇ ಸುಲಭವಾಗಿದೆ.

ಐಪಿಎಲ್ ನಲ್ಲಿ ಈಗಾಗಲೇ ಆಡಲಾದ 20 ಪಂದ್ಯಗಳ ಪೈಕಿ ಈಗಾಗಲೇ ತಂಡಗಳು 20ಕ್ಕೂ ಅಧಿಕ ಬಾರಿ 200ಕ್ಕಿಂತ ಅಧಿಕ ಮೊತ್ತ ಪೇರಿಸಿವೆ. ಎಷ್ಟು ಪ್ರಭಾವಿ ಬೌಲರ್ ಆಗಿದ್ದರೂ ಬ್ಯಾಟ್ಸ್ ಮನ್ ಗಳು ಸುಲಭವಾಗಿ ಸಿಕ್ಸರ್ ಬಾರಿಸುತ್ತಿದ್ದಾರೆ.

ಬುಮ್ರಾ ಅಂತಹ ಬೌಲರ್ ಗೆ ಸಿಕ್ಸರ್ ಹೊಡೆಯುವುದು ಕಷ್ಟ ಎನ್ನಲಾಗುತ್ತಿತ್ತು. ಆದರೆ 15  ವರ್ಷದ ಹುಡುಗ ವೈಭವ್ ಸೂರ್ಯವಂಶಿ 2 ಸಿಕ್ಸರ್ ಬಾರಿಸಿ ಸಂಚಲನ ಸೃಷ್ಟಿಸಿದರು. ಅಂಕಿ-ಅಂಶಗಳನ್ನು ಗಮನಿಸಿದರೆ ಬ್ಯಾಟ್ಸ್ ಮನ್ ಗಳು ಯಾವುದೇ ಬೌಲರ್ ಗೆ ಅಂಜದೇ ಸಿಕ್ಸರ್ ಸಿಡಿಸುವಷ್ಟು ಮೇಲುಗೈ ಸಾಧಿಸುತ್ತಿದ್ದಾರೆ. ಇದರಿಂದ ಬೌಲರ್ ಗಳು ವಿಕೆಟ್ ಪಡೆಯುವುದಿರಲಿ, ರನ್ ಗೆ ಕಡಿವಾಣ ಹಾಕಲು ಪರದಾಡುವಂತಾಗಿದೆ.

ಬಹುತೇಕ ತಂಡಗಳು ಓವರ್ ಗೆ ಸರಾಸರಿ 10ಕ್ಕಿಂತ ಅಧಿಕ ವೇಗದಲ್ಲಿ ರನ್ ಗಳಿಸುತ್ತಿದ್ದಾರೆ. ಅದರಲ್ಲೂ ಪವರ್ ಪ್ಲೇಗಳಲ್ಲಿ 12.24ರ ಸರಾಸರಿ ರನ್ ಚಚ್ಚುತ್ತಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಮೊದಲ 20 ಪಂದ್ಯಗಳಲ್ಲಿ ತಂಡಗಳು 10 ಸರಾಸರಿಗಿಂತ ಹೆಚ್ಚು ರನ್ ಕಲೆಹಾಕಿವೆ. 2025ರಲ್ಲಿ 9.25ರ ಸರಾಸರಿಯಲ್ಲಿ ರನ್ ಗಳಿಸಿದ್ದೇ ಗರಿಷ್ಠವಾಗಿತ್ತು. ಇದೀಗ ಆ ದಾಖಲೆಯನ್ನು ಮುರಿಯುವ ಮೂಲಕ ಐಪಿಎಲ್ ಬ್ಯಾಟಿಂಗ್ ಗೆ ಹೆಚ್ಚು ಒತ್ತು ಕೊಡುತ್ತಿದೆ ಎಂಬುದು ತಿಳಿದು ಬರುತ್ತದೆ.

ರನ್ ಹೊಳೆ ಹರಿಸಲು ಬದಲಾದ ಪವರ್ ಪ್ಲೇ ಆಟದ ವೈಖರಿ, 2022ರಲ್ಲಿ 7.45 ಇದ್ದ ಸರಾಸರಿ 2026ರಲ್ಲಿ 10.44ರ ಸರಾಸರಿ ದಾಖಲಾಗಿದೆ. ಸಿಕ್ಸರ್ ಗಳ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, 14.08 ಎಸೆತಗಳಿಗೆ ಒಂದು ಸಿಕ್ಸರ್ ಬರುತ್ತಿದ್ದು ಈಗ 11.05 ಎಸೆತಕ್ಕೆ ಬರುತ್ತಿದೆ.

200 ರನ್ ಚೇಸ್ ಮಾಡುವುದು ಕೂಡ ತಂಡಗಳಿಗೆ ಸುಲಭವಾಗಿದೆ. 20 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ 200ಕ್ಕಿಂತ ಅಧಿಕ ಮೊತ್ತವನ್ನು ಯಶಸ್ವಿಯಾಗಿ ಬೆಂಬತ್ತಲಾಗಿದೆ. 2022 ಮತರ್ತು 2023ರಲ್ಲಿ ತಲಾ 2 ಬಾರಿ ಚೇಸ್ ಮಾಡಿದ್ದೇ ದೊಡ್ಡ ದಾಖಲೆಯಾಗಿತ್ತು. ಆದರೆ ಇದೀಗ 20 ಪಂದ್ಯಗಳಲ್ಲೇ ಈ ದಾಖಲೆ ಅಳಿಸಿ ಹಾಕಲಾಗಿದೆ.

ಫಿಫ್ಟಿ ಇನ್ನಷ್ಟು ಸುಲಭ

ಬ್ಯಾಟ್ಸ್ ಮನ್ ಗಳಿಗೆ ಅರ್ಧಶತಕ ಬಾರಿಸುವುದು ದೊಡ್ಡ ಸವಾಲಿನ ವಿಷಯ. ಆದರೆ ಈ ಬಾರಿ ಅದು ಕೂಡ ಸುಲಭವಾಗಿದೆ. 20ಕ್ಕಿಂತ ಕಡಿಮೆ ಎಸೆತಗಳಲ್ಲಿ ಈ ಬಾರಿ 5 ಅರ್ಧಶತಕಗಳು ದಾಖಲಾಗಿವೆ. 25ಕ್ಕಿಂತ ಕಡಿಮೆ ಎಸೆತಗಳಲ್ಲಿ 14 ಫಿಫ್ಟಿ ಬಂದಿವೆ. ಒಟ್ಟಾರೆ 30ಕ್ಕಿಂತ ಕಡಿಮೆ ಎಸೆತಗಳಲ್ಲಿ 48 ಅರ್ಧಶತಕಗಳು ಬಂದಿರುವುದು ಕೂಡ ದಾಖಲೆಯಾಗಿದೆ. 2023ರಲ್ಲಿ 20ಕ್ಕಿಂತ ಕಡಿಮೆ ಎಸೆತದಲ್ಲಿ 3 ಹಾಗೂ ಒಟ್ಟಾರೆ 47 ಫಿಫ್ಟಿ ಬಂದಿದ್ದು ಇದುವರೆಗಿನ ದಾಖಲೆಯಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments