ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ‘ಬಿ’ ಗುಂಪಿನ ಪಂದ್ಯದಲ್ಲಿ ವಿ.ಕೌಶಿಕ್ ಅವರ ಮೂರು ವಿಕೆಟ್ ಗಳ ನೆರವಿನಿಂದ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 7 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ.
ಇಂದೋರ್ ನ ಎಮರಾಲ್ಡ್ ಹೈಟ್ಸ್ ಇಂಟರ್‌ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೌಶಿಕ್ 4-1-10-3 ಮಾರ ದಾಳಿಯಿಂದ ತಮಿಳುನಾಡಿನ ಪಾಲಿಗೆ ಸಿಂಹಸ್ವಪ್ನರಾದರು.
ಗೆಲ್ಲಲು 91 ರನ್ ಗಳಿಸುವಗುರಿ ಪಡೆದ ಕರ್ನಾಟಕಕ್ಕೆ ದಡ ತಲುಪಲು ಕೇವಲ 11.3 ಓವರ್‌ಗಳು ಸಾಕಾದವು. ಮನೀಶ್ ಪಾಂಡೆ 29 ಎಸೆತಗಳಲ್ಲಿ 42 ರನ್ ಸಿಡಿಸಿ ಕೆಲಸ ಸುಗಮ ಮಾಡಿದರು.
ಟೂರ್ನಿಯಲ್ಲಿ ಸತತ ಮೂರನೇ ಸೋಲನ್ನು ಅನುಭವಿಸಿರುವ ತಮಿಳುನಾಡಿಗೆ ನಾಕೌಟ್ ಹಂತಕ್ಕೆ ಪ್ರವೇಶಿಸುವ ಸಾಧ್ಯತೆಗಳು ಬಹುತೇಕ ಮುಗಿದಿವೆ.
ಟಾಸ್ ಸೋತು ಬ್ಯಾಟಿಂಗಿಗೆ ಇಳಿದ ತಮಿಳುನಾಡು ತಂಡವು ಕೇವಲ 7 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.
ಕೌಶಿಕ್ ಎಸೆದ ಮೊದಲ ಓರಿನಲ್ಲಿಯೇ ತಮಿಳು ಆರಂಭಿಕ ಜಗದೀಶ್ ಪಾಯಿಂಟ್‌ನಲ್ಲಿದ್ದ ಶುಭಾಂಗ್ ಹೆಗ್ಡೆ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಮುಂದಿನ ಓವರ್‌ನಲ್ಲಿ ಬಾಬಾ ಇಂದ್ರಜಿತ್ ವಿದ್ಯಾಧರ್ ಪಾಟೀಲ್‌ಗೆ ಶರಣಾದರು.
ಇನ್ನು ಮೂರನೇ ಓವರಿನಲ್ಲಿ ಭೂಪತಿ ವೈಷ್ಣ ಕುಮಾರ್ ಅವರನ್ನು ಕೌಶಿಕ್ ಪೆವಿಲಿಯನ್‌ಗೆ ವಾಪಸ್ ಕಳುಹಿಸುವ ಮೂಲಕ ಕರ್ನಾಟಕದಹಿಡಿದ ಬಿಗಿ ಮಾಡಿದರು.
ಈ ಕ್ಲಿಷ್ಟ ಪರಿಸ್ಥಿತಿಯಲ್ಲಿ ಶಾರುಖ್ ಖಾನ್ ಮತ್ತು ಮೊಹಮ್ಮದ್ ಅಲಿ ನಡುವಿನ 32 ರನ್‌ಗಳ ಜೊತೆಯಾಟವು ತಮಿಳುನಾಡಿಗೆ ಚೇತರಿಕೆಯ ಭರವಸೆಯನ್ನು ನೀಡಿತು. ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ.
“ವೇಗದ ಬೌಲರ್‌ಗಳಿಗೆ ಸ್ವಲ್ಪ ಸಹಾಯವಿದೆ ಎಂದು ನಾನು ಭಾವಿಸಿದ್ದೆ. ಎಲ್ಲಕ್ಕಿಂತ ಹೆಚ್ಚಾಗಿ, ಕಳೆದ ಪಂದ್ಯಗಳಿಗೆ ಹೋಲಿಸಿದರೆ ಉತ್ತಮ ಅಳತೆ ಕಂಡುಕೊಂಡಿದ್ದೇವೆ. ಹೀಗಾಗಿ ನಾನು ಅದರ ಲಾಭ ಪಡೆಯಲು ಯತ್ನಿಸಿದೆ” ಎಂದು ಕೌಶಿಕ್ ಹೇಳಿದರು.
ಸಂಕ್ಷಿಪ್ತ ಸ್ಕೋರ್: ತಮಿಳುನಾಡು 20 ಓವರ್ ಗಳಲ್ಲಿ 90 (ವಿ. ಕೌಶಿಕ್ 3/10, ಮನೋಜ್ ಭಾಂಡಗೆ 3/19) ಕರ್ನಾಟಕ ವಿರುದ್ಧ 11/3 ಓವರ್ ಗಳಲ್ಲಿ 93/3 (ಮನೀಶ್ ಪಾಂಡೆ 42, ಮಯಾಂಕ್ ಅಗರ್ ವಾಲ್ 30).