ಕಳಪೆ ಆರಂಭ ಪಡೆದರೂ ಸತತ ಗೆಲುವಿನ ಮೂಲಕ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 59 ರನ್ ಜಯದೊಂದಿಗೆ ದಾಖಲೆಯ 11ನೇ ಬಾರಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಗೆ ಲಗ್ಗೆ ಹಾಕಿದರೆ, ಆರಂಭದಲ್ಲಿ ಅಗ್ರಸ್ಥಾನ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿದೆ.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಅರ್ದಶತಕದ ನೆರವಿನಿಂದ 5 ವಿಕೆಟ್ ಗೆ 180 ರನ್ ಪೇರಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಡೆಲ್ಲಿ ಕ್ಯಾಪಿಟಲ್ಸ್ 18.2 ಓವರ್ ಗಳಲ್ಲಿ 121 ರನ್ ಗೆ ಆಲೌಟಾಯಿತು.
ಆರಂಭದಲ್ಲಿ ಸತತ ಸೋಲುಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ 13 ಪಂದ್ಯಗಳಲ್ಲಿ 8 ಜಯ ಹಾಗೂ 5 ಸೋಲಿನೊಂದಿಗೆ 16 ಅಂಕ ಸಂಪಾದಿಸಿ 4ನೇ ತಂಡವಾಗಿ ಪ್ಲೇಆಫ್ ಪ್ರವೇಶಿಸಿತು.
ಮತ್ತೊಂದೆಡೆ ಆರಂಭಿಕ ಹಂತದಲ್ಲಿ ಸತತ ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ 13 ಪಂದ್ಯಗಳಲ್ಲಿ 6 ಜಯ ಹಾಗೂ 6 ಸೋಲು ಹಾಗೂ ಒಂದು ಅಂಕದಿಂದ 13 ಅಂಕ ಗಳಿಸಿ 5ನೇ ಸ್ಥಾನ ಪಡೆಯುವ ಮೂಲಕ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿತು.
ಪೈಪೋಟಿಯ ಮೊತ್ತ ಬೆಂಬತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಿಂದಲೇ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಇದರಿಂದ ಸಾಧಾರಣ ಮೊತ್ತ ಬೆಂಬತ್ತುವಲ್ಲಿ ಯಾವುದೇ ಹಂತದಲ್ಲೂ ಭರವಸೆ ಮೂಡಿಸಲಿಲ್ಲ. ಸ್ಪಿನ್ನರ್ ಮಿಚೆಲ್ ಸ್ನಾಂಟ್ನರ್ ಮತ್ತು ಜಸ್ ಪ್ರೀತ್ ಬುಮ್ರಾ ತಲಾ 3 ವಿಕೆಟ್ ಪಡೆದು ಡೆಲ್ಲಿ ಪಾಲಿಗೆ ಮುಳ್ಳಾದರು. ಭರ್ಜರಿ ಫಾರ್ಮ್ ನಲ್ಲಿದ್ದ ಕೆಎಲ್ ರಾಹುಲ್ (11), ಹಂಗಾಮಿ ನಾಯಕ ಫಾಫ್ ಡು ಪ್ಲೆಸಿಸ್ (6) ಮತ್ತು ಅಭಿಷೇಕ್ ಪೊರೆಲ್ (6) ಕಳಪೆ ಮೊತ್ತಕ್ಕೆ ಔಟಾಗಿ ನಿರಾಸೆ ಮೂಡಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಸತತ ವಿಕೆಟ್ ಕಳೆದುಕೊಂಡರೂ ಸೂರ್ಯಕುಮಾರ್ ಯಾದವ್ 43 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 73 ರನ್ ಸಿಡಿಸಿ ತಂಡವನ್ನು ಆಧರಿಸಿದರು. ರಿಯಾನ್ ರಿಕಲ್ಟನ್ (25), ವಿಲ್ ಜಾಕ್ಸ್ (21), ತಿಲಕ್ ವರ್ಮಾ (27) ಮತ್ತು ನಮನ್ ದಿರ್ (ಅಜೇಯ 24 ರನ್ ,8 ಎಸೆತ) ಉಪಯುಕ್ತ ಕಾಣಿಕೆ ನೀಡಿದರು.


