ಮಧ್ಯಮ ವೇಗಿ ಮಿಚೆಲ್ ಸ್ಟಾರ್ಕ್ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ ಪಿಂಕ್ ಚೆಂಡಿನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 180 ರನ್ ಗೆ ಆಲೌಟಾಗಿದೆ.
ಅಡಿಲೇಡ್ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಭಾರತ ತಂಡ ಚಹಾ ವಿರಾಮದ ವೇಳೆಗೆ ಮೊದಲ ಇನಿಂಗ್ಸ್ ನಲ್ಲಿ 44.1 ಓವರ್ ಗಳಲ್ಲಿ 180 ರನ್ ಗೆ ಪತನಗೊಂಡಿತು.
ಮೊದಲ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ಮಿಂಚಿದ್ದ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ನ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾಗಿ ಆಘಾತ ಅನುಭವಿಸಿದರು.
ಆದರೆ ಭಾರೀ ಚರ್ಚೆಯ ನಂತರ ಆರಂಭಿಕ ಸ್ಥಾನದಲ್ಲಿ ಇಳಿದ ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಎರಡನೇ ವಿಕೆಟ್ ಗೆ 69 ರನ್ ಜೊತೆಯಾಟ ನಿಭಾಯಿಸಿ ಚೇತರಿಕೆ ನೀಡಿದರು.
ಉತ್ತಮವಾಗಿ ಆಡುತ್ತಿದ್ದ ಕೆಎಲ್ ರಾಹುಲ್ 64 ಎಸೆತಗಳಲ್ಲಿ 6 ಬೌಂಡರಿ ಒಳಗೊಂಡ 37 ರನ್ ಗಳಿಸಿದ್ದಾಗ ಮಿಚಲ್ ಸ್ಟಾರ್ಕ್ ಗೆ ಎರಡನೇ ಬಲಿಯಾದರು. ಈ ಜೊತೆಯಾಟ ಬೇರ್ಪಡುತ್ತಿದ್ದಂತೆ ಭಾರತ ತಂಡ ನಾಟಕೀಯ ಕುಸಿತ ಕಂಡಿತು.
ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಲಯ ಕಂಡುಕೊಂಡಿದ್ದ ವಿರಾಟ್ ಕೊಹ್ಲಿ ಆತ್ಮವಿಶ್ವಾಸದಿಂದಲೇ ಇನಿಂಗ್ಸ್ ಆರಂಭಿಸಿದರಾದರೂ 7 ರನ್ ಗಳಿಸಿದ್ದಾಗ ಸ್ಟಾರ್ಕ್ ಅವರ ಅನಿರೀಕ್ಷಿತ ಎಸೆತದಲ್ಲಿ ವಿಕೆಟ್ ಹಿಂದೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಕೊಹ್ಲಿ ಔಟಾಗುತ್ತಿದ್ದಂತೆ ಒತ್ತಡಕ್ಕೆ ಸಿಲುಕಿದ ಶುಭಮನ್ ಗಿಲ್ ಬೋಲಂಡ್ ಗೆ ವಿಕೆಟ್ ಒಪ್ಪಿಸಿದರು. ಇದಕ್ಕೂ ಮುನ್ನ ಗಿಲ್ 51 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ 31 ರನ್ ಬಾರಿಸಿದರು.
ರಿಷಭ್ ಪಂತ್ (22) ನೆಲೆ ಕಂಡುಕೊಳ್ಳುವ ಹಂತದಲ್ಲಿ ವಿಕೆಟ್ ಕೈ ಚೆಲ್ಲಿದರೆ, ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ನಾಯಕ ರೋಹಿತ್ ಶರ್ಮ (3) ವಿಫಲರಾದರು.
ನಿತೀಶ್ ಕುಮಾರ್ ರೆಡ್ಡಿ ಕೆಳ ಕ್ರಮಾಂಕದಲ್ಲಿ ಏಕಾಂಗಿ ಹೋರಾಟ ನಡೆಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ನಿತೀಶ್ ಕುಮಾರ್ 54 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 42 ರನ್ ಗಳಿಸಿದ್ದೂ ಅಲ್ಲದೇ ಆರ್.ಅಶ್ವಿನ್ (22) ಜೊತೆ 6ನೇ ವಿಕೆಟ್ ಗೆ 33 ರನ್ ಜೊತೆಯಾಟ ನಿಭಾಯಿಸಿದರು.
ಮಿಚೆಲ್ ಸ್ಟಾರ್ಕ್ ಟೆಸ್ಟ್ ಕ್ರಿಕೆಟ್ ನಲ್ಲಿ 15ನೇ ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದರು. ಬೋಲಂಡ್ ಮತ್ತು ಪ್ಯಾಟ್ ಕಮಿನ್ಸ್ ತಲಾ 2 ವಿಕೆಟ್ ಗಳಿಸಿದರು.
ಭಾರತ ತಂಡ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.