ರಾಜ್ಯಮಟ್ಟದ ಕ್ರೀಡಾಪಟುಗಳಿಗೆ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ನೀಡಲು ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಮೂಲಕ ರಾಜ್ಯದ ಕ್ರೀಡಾಪಟುಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಆರಂಭಗೊಂಡ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಉತ್ತೇಜನ ನೀಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೆ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ನೀಡಲು ಚಿಂತನೆ ನಡೆಸಲಾಗಿದೆ. ಇದರಿಂದ ಕ್ರೀಡಾಪಟುಗಳಿಗೆ ಕಡಿಮೆ ಅಂಕದ ಭೀತಿ ದೂರ ಮಾಡುವ ಪ್ರಯತ್ನ ನಡೆದಿದೆ ಎಂದು ಅವರು ಹೇಳಿದರು.
ರಾಜ್ಯದ ಕ್ರೀಡಾಪಟುಗಳು ಕಾಮನ್ ವೆಲ್ತ್, ಒಲಿಂಪಿಕ್ಸ್ ನಂತಹ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತಾಗಬೇಕು. ಈಗಾಗಲೇ ಸರ್ಕಾರ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತರಿಗೆ ೫ ಕೋಟಿ ರೂ. ಹಾಗೂ ಬೆಳ್ಳಿ ಪದಕ ವಿಜೇತರಿಗೆ ೩ ಕೋಟಿ ರೂ. ಬಹುಮಾನ ಘೋಷಿಸಲಾಗಿದೆ ಎಂದು ಅವರು ವಿವರಿಸಿದರು.
ಕ್ರೀಡಾಪಟುಗಳಿಗೆ ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಶೇ.೩ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಅಲ್ಲದೇ ಶೇ.೨ರಷ್ಟು ಇತರೆ ಇಲಾಖೆಗಳಲ್ಲಿ ಮೀಸಲು ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ಕ್ರೀಡಾಪಟುಗಳು ಪಡೆಯಬೇಕು ಎಂದು ಸಿದ್ದರಾಮಯ್ಯ ಹೇಳಿದರು.