ನಾಯಕ ಮೊಹಮದ್ ಅಮಾನ್ ಸಿಡಿಸಿದ ಶತಕದ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ಏಷ್ಯಾಕಪ್ ಏಕದಿನ ಪಂದ್ಯದಲ್ಲಿ ಜಪಾನ್ ವಿರುದ್ಧ 211 ರನ್ ಗಳ ಭಾರೀ ಅಂತರದಿಂದ ಜಯಭೇರಿ ಬಾರಿಸಿದೆ.
ಶಾರ್ಜಾದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 339 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಜಪಾನ್ 50 ಓವರ್ ಗಳಲ್ಲಿ 8 ವಿಕೆಟ್ ಗೆ 128 ರನ್ ಗಳಿಸಲಷ್ಟೇ ಶಕ್ತವಾಯಿತು.
ಅನನುಭವಿ ಜಪಾನ್ ತಂಡ ನಿರೀಕ್ಷೆಗೂ ಮೀರಿ ಉತ್ತಮ ಆರಂಭ ಪಡೆಯಿತು. ಆರಂಭಿಕ ಹುಗೊ ಕೆಲ್ಲಿ (50) ಅರ್ಧಶತಕ ಬಾರಿಸಿದ್ದೂ ಅಲ್ಲದೇ ಮೊದಲ ವಿಕೆಟ್ ಗೆ 50 ರನ್ ಗಳ ಜೊತೆಯಾಟದಿಂದ ಉತ್ತಮ ಆರಂಭ ಒದಗಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಚಾರ್ಲ್ಸ್ ಹಿನ್ಜ್ (35) ಹೋರಾಟ ನಡೆಸಿದ್ದು ಬಿಟ್ಟರೆ ಉಳಿದವರು ನೆಲೆ ಕಂಡುಕೊಳ್ಳಲು ವಿಫಲರಾದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ನಾಯಕ ಮೊಹಮದ್ ಅಮಾನ್ ಶತಕ ಸಿಡಿಸಿ ಬೃಹತ್ ಮೊತ್ತ ದಾಖಲಿಸಲು ನೆರವಾದರು.
ಅಮಾನ್ 118 ಎಸೆತಗಳಲ್ಲಿ 7 ಬೌಂಡರಿ ಸೇರಿದ 122 ರನ್ ಬಾರಿಸಿ ಔಟಾಗದೇ ಉಳಿದರೆ, ಆಯುಷ್ ಮಾತ್ರೆ (54) ಮತ್ತು ಕಾರ್ತಿಕೇಯ (57) ಅರ್ಧಶತಕಗಳನ್ನು ಬಾರಿಸಿ ತಂಡದ ಮೊತ್ತ 300ರ ಗಡಿ ದಾಟಿಸಿದರು.