ಎನ್ ಸಿಇಆರ್ ಟಿಯ 8ನೇ ತರಗತಿ ಪಠ್ಯ ಪುಸ್ತಕ ವಿವಾದದ ಹಿನ್ನೆಲೆಯಲ್ಲಿ ಪಠ್ಯ ರಚನೆ ಸಮಿತಿಯಿಂದ ಶಿಕ್ಷಣ ತಜ್ಞರಾದ ಬೆಂಗಳೂರಿನ ಸುಪರ್ಣಾ ದಿವಾಕರ್, ಅಲೋಕ್ ಪ್ರಸನ್ನ ಕುಮಾರ್ ಹಾಗೂ ಫ್ರಾನ್ಸ್ ನ ಮಿಚೆಲ್ ಡೆನಿನೊ ಅವರನ್ನು ಹೊರಹಾಕುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
8ನೇ ತರಗತಿಯ ಪಠ್ಯದಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಕುರಿತು ಪಠ್ಯ ಸೇರ್ಪಡೆ ಮಾಡಿದ್ದಕ್ಕಾಗಿ ಸುಪ್ರೀಂಕೋರ್ಟ್ ಆಕ್ರೋಶ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ೮ನೇ ತರಗತಿಯ ಪೂರ್ಣ ಪಠ್ಯವನ್ನು ವಾಪಸ್ ಪಡೆದಿದ್ದೂ ಅಲ್ಲದೇ ಬೇಷರತ್ ಆಗಿ ಕ್ಷಮೆಯಾಚಿಸಿತ್ತು.
ಇದೀಗ ಪಠ್ಯ ರೂಪಿಸುವ ಸಮಿತಿಯಲ್ಲಿದ್ದ ಬೆಂಗಳೂರಿನ ಆರ್ ವಿ ವಿಶ್ವವಿದ್ಯಾಲಯದ ಸ್ಫೂರ್ತಿಯುತ ನಾಯಕತ್ವದ ಉಪನ್ಯಾಸಕಿ ಹಾಗೂ ಐಎಸ್ ಡಿಎಂ ಸಂಸ್ಥಾಪಕಿ ಸುಪರ್ಣಾ ದಿವಾಕರ್, ಕಾನೂನು ಸಲಹೆಗಾರ ಹಾಗೂ ಹಿಂದೂತ್ವ ಪ್ರತಿಪಾದಕ ಅಲೋಕ್ ಪ್ರಸನ್ನ ಕುಮಾರ್ ಹಾಗೂ ಫ್ರಾನ್ಸ್ ನ ಶಿಕ್ಷಣ ತಜ್ಞ ಮಿಚೆಲ್ ಡೆನಿನೊ ಅವರನ್ನು ಕೂಡಲೇ ಎನ್ ಸಿಇಆರ್ ಟಿ ಹುದ್ದೆಗಳಿಂದ ವಜಾಗೊಳಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ಪಠ್ಯ ರಚನೆಗೆ ಶಿಕ್ಷಣ ವಿಭಾಗದಲ್ಲಿ ತಜ್ಞರ ನೂತನ ಸಮಿತಿ ರಚಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂಕೋರ್ಟ್, ಸಮಿತಿಯಲ್ಲಿ ಮಾಜಿ ನ್ಯಾಯಾಧೀಶರು, ಶಿಕ್ಷಣ ತಜ್ಞರು ಹಾಗೂ ಹಿರಿಯ ಕಾನೂನು ತಜ್ಞರನ್ನು ನೇಮಿಸುವಂತೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ಎನ್ ಸಿಇಆರ್ ಟ ಪಠ್ಯ ರಚನೆಗೆ ಒಂದು ಸಮುದಾಯ ಪ್ರತಿನಿಧಿಸುವ ಹಾಗೂ ಕಾನೂನಿನ ಅರಿವು ಇಲ್ಲದ ನೇಮಕ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಈ ಹಿಂದೆಯೇ ಇಂತಹ ವಿಷಯ ಸೇರ್ಪಡೆ ಮಾಡಿದವರ ತಲೆದಂಡ ಆಗಬೇಕು ಎಂದು ಹೇಳಿತ್ತು. ಇದೀಗ ಸಮಿತಿಯಲ್ಲಿದ್ದ ಮೂವರನ್ನು ವಜಾಗೊಳಿಸಿದ್ದು, ಹೊಸ ಸಮಿತಿ ರಚನೆಗೆ ಸೂಚಿಸಿದೆ.



