ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಭಾರತದ ಯುವಪಡೆಗೆ 13 ರನ್ ಗಳಿಂದ ಆಘಾತ ನೀಡಿದ ಜಿಂಬಾಬ್ವೆ ತಂಡ ಟಿ-20 ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.
ಹರಾರೆಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಶುಭಮನ್ ಗಿಲ್ ಎದುರಾಳಿ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಜಿಂಬಾಬ್ವೆ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 115 ರನ್ ಗಳಿಸಿತು. ಸುಲಭ ಗುರಿ ಬೆಂಬತ್ತಿದ ಭಾರತ ತಂಡ 19.5 ಓವರ್ ಗಳಲ್ಲಿ 102 ರನ್ ಗೆ ಪತನಗೊಂಡಿತು.
ಭಾರತ ತಂಡ ಒಂದು ಕಡೆ ವಿಶ್ವಕಪ್ ಗೆದ್ದು ಚಾಂಪಿಯನ್ ಆದ ಬೆನ್ನಲ್ಲೇ ಯುವ ಆಟಗಾರರಿಗೆ ಮಣೆಹಾಕಿದ ಸರಣಿಯ ಮೊದಲ ಪಂದ್ಯದಲ್ಲೇ ಸೋಲುಂಡಿದೆ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಯುವ ಆಟಗಾರರು ವಿಫಲರಾದರು.
ಭಾರತ ತಂಡದ ಪರ ಶುಭಮನ್ ಗಿಲ್ (31), ವಾಷಿಂಗ್ಟನ್ ಸುಂದರ್ (27) ಮತ್ತು ಆವೇಶ್ ಖಾನ್ (17) ಹೊರತುಪಡಿಸಿದರೆ ಉಳಿದ ಯಾವುದೇ ಆಟಗಾರ ನೆಲಕಚ್ಚಿ ಆಡಲು ವಿಫಲರಾದರು. ಜಿಂಬಾಬ್ವೆ ಪರ ನಾಯಕ ಸಿಕಂದರ್ ರಾಜಾ ಮತ್ತು ಟೆಂಡೈ ಚಾಕರಾ ತಲಾ 3 ವಿಕೆಟ್ ಪಡೆದು ಭಾರತದ ಅನನುಭವಿ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
ಜಿಂಬಾಬ್ವೆ ಪರ ವೆಸ್ಲೆ ಮಧವೇರೆ (21), ಬ್ರಿಯಾನ್ ಬೆನೆಟ್ (22) ಮತ್ತು ಡಿಯೊನ್ ಮೈರೆಸ್ (23) ಉತ್ತಮ ಪೈಪೋಟಿ ಒಡ್ಡಿದರು. ಕೊನೆಯಲ್ಲಿ ಕ್ಲೇವ್ ಮಡೇನ್ 25 ಎಸೆತದಲ್ಲಿ 4 ಬೌಂಡರಿ ಸೇರಿದ 29 ರನ್ ಬಾರಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಭಾರತದ ಪರ ರವಿ ಬಿಶ್ನೋಯಿ 4 ವಿಕೆಟ್ ಪಡೆದು ಮಿಂಚಿದರೆ, ವಾಷಿಂಗ್ಟನ್ ಸುಂದರ್ 2 ಮತ್ತು ಮುಖೇಶ್ ಕುಮಾರ್ ಮತ್ತು ಆವೇಶ್ ಖಾನ್ ತಲಾ 1 ವಿಕೆಟ್ ಗಳಿಸಿದರು.