Monday, June 8, 2026
Google search engine
Homeಜಿಲ್ಲಾ ಸುದ್ದಿಮೊದಲ ಮಳೆಗೇ ಜಲಪಾತ ಸೃಷ್ಟಿ; ತೇಲಿಹೋದ ವಾಹನಗಳು

ಮೊದಲ ಮಳೆಗೇ ಜಲಪಾತ ಸೃಷ್ಟಿ; ತೇಲಿಹೋದ ವಾಹನಗಳು

ಬೆಳಗಾವಿ : ಜಿಲ್ಲೆಯ ಬೈಲಹೊಂಗಲ, ಚನ್ನಮ್ಮನ ಕಿತ್ತೂರು, ಯರಗಟ್ಟಿ ಹಾಗೂ ಸವದತ್ತಿ ತಾಲ್ಲೂಕುಗಳಲ್ಲಿ ಸೋಮವಾರ ಧಾರಾಕಾರ ಮಳೆ ಸುರಿತು. ಮೂರು ತಾಸಿಗೂ ಅಧಿಕ ಸಮಯ ಸುರಿದ ಮಳೆಯಿಂದಾಗಿ ಹಲವು ಮರ, ವಿದ್ಯುತ್‌ ಕಂಬಗಳು ಉರುಳಿದವು. ಬೈಕುಗಳು, ಆಟೊಗಳು, ಟ್ರ್ಯಾಕ್ಟರ್‌, ಕಾರುಗಳು ತೇಲಿದವು.

ಬೈಲಹೊಂಗಲದಲ್ಲಂತೂ ಮೊದಲ ಮಳೆ ರುದ್ರಾವತಾರ ತಾಳಿತು. ಸಂಜೆ ಏಕಾಏಕಿ ಗುಡುಗು, ಸಿಡಿಲಿನ ಸಮೇತ ಆರಂಭವಾದ ಮಳೆ ಕೆಲವೇ ನಿಮಿಷಗಳಲ್ಲಿ ಬಿರುಸು ಪಡೆಯಿತು. ಬಸ್‌ ನಿಲ್ದಾಣದ ಚರಂಡಿಗಳು ತುಂಬಿಕೊಂಡು 3 ಅಡಿಯಷ್ಟು ನೀರು 80 ಅಡಿ ಅಗಲದ ರಸ್ತೆ ಮೇಲೆ ಹರಿಯಿತು. ಚಲಿಸುತ್ತಿದ್ದ ಟ್ರ್ಯಾಕ್ಟರೊಂದು ನೀರಿನ ರಭಸಕ್ಕೆ ಹಿಂದಕ್ಕೆ ಜರಿದು ಕಾರಿಗೆ ಡಿಕ್ಕಿ ಹೊಡೆಯಿತು.

ಸಮೀಪದ ಇಂಚಲ ರಸ್ತೆ, ಆನೆ ಅಗಸಿ ಮುಂತಾದ ಪ್ರದೇಶಗಳಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಹತ್ತಾರು ಬೈಕುಗಳು, ಆಟೊಗಳು ತೇಲಿಹೋದವು. ಮಾಲೀಕರು ಓಡಿ ಬಂದು ಅವುಗಳನ್ನು ಹಿಡಿದುಕೊಂಡರು. ನ್ಯಾಯಾಲಯ ಬಳಿ ಬೃಹತ್‌ ಮರ ರಸ್ತೆಗೆ ಬಿದ್ದು, ಸಂಚಾರ ಬಂದ್‌ ಆಯಿತು. ಕಿರಿದಾದ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿದು, ನೂರಾರು ಮನೆಗಳಿಗೆ ನುಗ್ಗಿತು.

ಚನ್ನಮ್ಮನ ಕಿತ್ತೂರು ಪಟ್ಟಣದಲ್ಲೂ ರಭಸದ ಮಳೆಯ ಕಾರಣ ಸೋಮವಾರದ ಸಂತೆಗೆ ತಂದಿದ್ದ ತರಕಾರಿ, ದಿನಸಿ ವಸ್ತುಗಳೆಲ್ಲ ನೀರುಪಾಲಾದವು. ಸಂತೆ ಅರ್ಧಕ್ಕೆ ನಿಂತುಹೋತು. ಸವದತ್ತಿ ಪಟ್ಟಣದ ರಸ್ತೆಗಳು ಕಿರಿದಾಗಿದ್ದರಿಂದ ಮಳೆಯ ನೀರು ಎರಡು ಅಡಿಯಷ್ಟು ಹರಿಯಿತು. ಜನ ಸಂಚಾರ ಮಾಡುತ್ತಿದ್ದ ಮೂರು ಟಂಟಂ ವಾಹನಗಳು ನೀರಿನ ರಭಸಕ್ಕೆ ಸಿಕ್ಕಿ ಹಿಂದಕ್ಕೆ ಜರಿದು ಹೋದವು. ಅದೃಷ್ಟವಶಾತ್‌ ಯಾರಿಗೂ ಅಪಾಯವಾಗಲಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments